ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮತ್ತೆ ಪ್ರಾರಂಭವಾಗಲಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದ ಬಳಿಕ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮಂಗಳೂರು-ಶಾರ್ಜಾ ನಡುವಿನ ಪ್ರತಿದಿನದ ವಿಮಾನ ಸೇವೆ ಮಾರ್ಚ್ 16 ರಿಂದ ಆರಂಭವಾಗಲಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ. ಮಾರ್ಚ್ 28ರ ತನಕ ಪ್ರತಿದಿನ ವಿಮಾನಗಳು ಹಾರಾಟವನ್ನು ನಡೆಸಲಿವೆ.
ಏರ್ ಇಂಡಿಯಾ ಮಂಗಳೂರು-ಶಾರ್ಜಾ ನಡುವೆ ಪ್ರತಿದಿನ ವಿಮಾನ ಹಾರಾಟವನ್ನು ಪುನಃ ಪ್ರಾರಂಭಿಸಲಿದೆ. ಏರ್ ಇಂಡಿಯಾ ವಿಮಾನ ಮಂಗಳೂರು ನಗರದಿಂದ 1.25ಕ್ಕೆ ಹೊರಡಲಿದ್ದು, ಶಾರ್ಜಾವನ್ನು ಸ್ಥಳೀಯ ಕಾಲಮಾನ 4.05ಕ್ಕೆ ತಲುಪಲಿದೆ.
ಶಾರ್ಜಾದಿಂದ ಸ್ಥಳೀಯ ಕಾಲಮಾನ 5.05ಕ್ಕೆ ಹೊರಡುವ ವಿಮಾನ ಮಂಗಳೂರು ನಗರಕ್ಕೆ ರಾತ್ರಿ 10.30ಕ್ಕೆ ಆಗಮಿಸಲಿದೆ ಎಂದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವು ರಾಷ್ಟ್ರಗಳಿಗೆ ವಿಮಾನ ಸೇವೆ ಇದೆ. ಆದರೆ ಇರಾನ್-ಇಸ್ರೇಲ್ ಸಂಘರ್ಷದ ಕಾರಣ ವಿವಿಧ ದೇಶಗಳು ವಾಯು ಪ್ರದೇಶದ ಮೇಲೆ ನಿರ್ಬಂಧ ಹೇರಿರುವ ಕಾರಣ ವಿಮಾನ ಸಂಚಾರ ರದ್ದುಗೊಂಡಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರದಲ್ಲಿ ದುಬೈಗೆ 17, ಅಬುಧಾಬಿಗೆ 14, ದೋಹಾಕ್ಕೆ 3, ಜಿದ್ದಾಗೆ 3, ಮಸ್ಕತ್2, ಬಹರೈನ್ 4, ಕುವೈತ್ 3, ದುಮ್ಮಾನ್ 6 ವಿಮಾನಗಳು ಸಂಚಾರವನ್ನು ನಡೆಸುತ್ತವೆ.
ಬೆಂಗಳೂರು ಹೊರತುಪಡಿಸಿದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನಾಟದ ಅತ್ಯಂತ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಕರ್ನಾಟಕದ ಮಾತ್ರವಲ್ಲ ಕೇರಳದಿಂದಲೂ ಜನರು ಇಲ್ಲಿಗೆ ಆಗಮಿಸಿ ಬೇರೆ ದೇಶಗಳಿಗೆ ಸಂಚಾರವನ್ನು ನಡೆಸುತ್ತಾರೆ.

