HomeIndiaದೋಸೆ, ಆಮ್ಲೆಟ್ ಇಲ್ಲ: ಇನ್ಫೋಸಿಸ್ ಕಚೇರಿ ಮೆನು ಕಟ್

ದೋಸೆ, ಆಮ್ಲೆಟ್ ಇಲ್ಲ: ಇನ್ಫೋಸಿಸ್ ಕಚೇರಿ ಮೆನು ಕಟ್

ವಾಣಿಜ್ಯ ಬಳಕೆಯ ಸಿಲಿಂಡರ್‌ ಸರಬರಾಜು ವ್ಯತ್ಯಯದ ಬಿಸಿ ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಪಿಜಿ, ಐಟಿ ಕಚೇರಿಗಳಿಗೂ ತಟ್ಟಿದೆ. ಇನ್ಪೋಸಿಸ್ ತನ್ನ ಭಾರತದ ಕ್ಯಾಂಪಸ್‌ಗಳಲ್ಲಿನ ಮೆನು ಕಡಿತ ಮಾಡಿದೆ. ಸಿಲಿಂಡರ್ ಸಮಸ್ಯೆ ಬಗೆಹರಿಯುವ ತನಕ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡುವ ಕುರಿತು ಕೆಲವು ಐಟಿ ಕಂಪನಿಗಳು ಚಿಂತನೆ ನಡೆಸಿವೆ.

ಇನ್ಫೋಸಿಸ್ ಬೆಂಗಳೂರು, ಪುಣೆ ಮತ್ತು ಚೆನ್ನೈ ನಗರದಲ್ಲಿರುವ ಕಚೇರಿಗಳ ಮೆನು ಕಡಿತ ಮಾಡಿದೆ. ದೋಸೆ ಮತ್ತು ಆಮ್ಲೆಟ್ ಮೆನುವಿನಿಂದ ಕಾಣೆಯಾಗಿದೆ. ಮಾರ್ಚ್ 11ರಂದು ಈ ಕುರಿತು ಉದ್ಯೋಗಿಗಳಿಗೆ ಇ-ಮೇಲ್ ಕಳಿಸಲಾಗಿದೆ.

ಆಡಳಿತಾತ್ಮಕ ಬದಲಾವಣೆಗಳ ಹಿನ್ನಲೆಯಲ್ಲಿ ಉದ್ಯೋಗಿಗಳು ಸಹ ಸಹಕಾರ ನೀಡಬೇಕು ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ. ದೋಸೆ, ಆಮ್ಲೆಟ್ ಮಾಡಲು ಹೆಚ್ಚಿನ ಗ್ಯಾಸ್ ಬೇಕಾದ ಕಾರಣ ಆ ತಿಂಡಿಗಳನ್ನು ಮೆನುವಿನಿಂದ ಕಡಿತ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ 2ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಕಂಪನಿಯಾದ ಇನ್ಫೋಸಿಸ್ ಭಾರತದಲ್ಲಿ 50+ ಕಚೇರಿಯಗಳನ್ನು ಹೊಂದಿದೆ. ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿನ ಕೊರತೆಯಿಂದಾಗಿ ಬೆಂಗಳೂರು, ಚೆನ್ನೈ ಮತ್ತು ಪುಣೆ ಕ್ಯಾಂಪಸ್‌ಗಳಲ್ಲಿನ ಫುಡ್ ಕೋರ್ಟ್ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ.

ಎಲ್‌ಪಿಜಿ ಲಭ್ಯತೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ತುರ್ತು ಪರಿಸ್ಥಿತಿಯನ್ನು ಕಂಪನಿಯು ನಿಭಾಯಿಸುತ್ತಿದ್ದು, ಮಾರ್ಚ್ 12 ರಿಂದ ಕೆಫೆಟೇರಿಯಾ ಕಾರ್ಯಾಚರಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಇ-ಮೇಲ್‌ನಲ್ಲಿ ತಿಳಿಸಿದೆ.

ಫುಡ್ ಕೋರ್ಟ್ ಕಾರ್ಯಾಚರಣೆಯನ್ನು ಮರುಹೊಂದಿಸಲಾಗಿದೆ. ಕೆಲವು ಖಾದ್ಯಗಳ ಲಭ್ಯತೆಯನ್ನು ಸೀಮಿತಗೊಳಿಸಲಾಗಿದೆ ಮತ್ತು ಮುಂದಿನ ಸೂಚನೆಯವರೆಗೆ ಲೈವ್ ಕುಕಿಂಗ್ ಕೌಂಟರ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದೆ.

ಸಾಮಾನ್ಯವಾಗಿ ಕ್ಯಾಂಪಸ್‌ಗಳಲ್ಲಿನ ಕೌಂಟರ್‌ಗಳಲ್ಲಿ ದೋಸೆ ಮತ್ತು ಆಮ್ಲೆಟ್‌ಗಳಂತಹ ಬಿಸಿಬಿಸಿ ತಿಂಡಿಗಳನ್ನು ತಯಾರಿಸಲಾಗುತ್ತಿತ್ತು. ಅತಿ ಹೆಚ್ಚಿನ ಉರಿಯಲ್ಲಿ ಬೇಯಿಸಬೇಕಾದ ಇಂತಹ ಖಾದ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

ಕಂಪನಿಯ ಮಾಹಿತಿಯಂತೆ ಸಾಮಾನ್ಯವಾಗಿ ಬೆಂಗಳೂರಿನ ಡೆವಲಪ್‌ಮೆಂಟ್ ಸೆಂಟರ್ ಕ್ಯಾಂಪಸ್‌ಗೆ ಪ್ರತಿದಿನ 20,000 ಉದ್ಯೋಗಿಗಳು ಬರುತ್ತಾರೆ. ಈಗ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಆಗಿರುವ ಕಾರಣಕ್ಕೆ, ಫುಡ್‌ಕೋರ್ಟ್‌ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ.

ಪುಣೆ ಕಚೇರಿಯ ಉದ್ಯೋಗಿಗಳಿಗೆ ಕಳುಹಿಸಲಾದ ಇ-ಮೇಲ್‌ನಲ್ಲಿ ಫುಡ್ ಕೋರ್ಟ್‌ನಲ್ಲಿ ಕಡಿಮೆ ಪ್ರಮಾಣದ ಎಲ್‌ಪಿಜಿ ದೊರೆಯುತ್ತಿದೆ. ಹೀಗಾಗಿ, ಎಲ್ಲಾ ಫುಡ್ ಕೋರ್ಟ್‌ಗಳು ತಾತ್ಕಾಲಿಕವಾಗಿ ಸೀಮಿತ ಮೆನುವಿನೊಂದಿಗೆ ಕಾರ್ಯನಿರ್ವಹಿಸಲಿವೆ. ಕೆಲವು ಬೇಯಿಸಿದ ಆಹಾರವನ್ನು ಹೊರಗಿನಿಂದ ತರಿಸಲಾಗುವುದು. ವಿದ್ಯುತ್ ಉಪಕರಣಗಳು ಅಥವಾ ಜೈವಿಕ ಇಂಧನದ ಮೂಲಕ ಪರ್ಯಾಯ ಇಂಧನದತ್ತ ಗಮನಹರಿಸಲಾಗಿದೆ ಎಂದು ಹೇಳಿದೆ.

ಕ್ಯಾಂಪಸ್‌ನಲ್ಲಿ ಕ್ಯಾಟರಿಂಗ್ ವ್ಯವಸ್ಥೆ ಅಗತ್ಯವಿರುವ ಯಾವುದೇ ಕಾರ್ಯಕ್ರಮಗಳನ್ನು ಯೋಜಿಸದಂತೆ ಮತ್ತು ಸಾಧ್ಯವಾದಷ್ಟು ಮನೆಯಿಂದಲೇ ಊಟ ತರುವಂತೆ ಕಂಪನಿಯು ಉದ್ಯೋಗಿಗಳಿಗೆ ಸಲಹೆ ನೀಡಿದೆ.

3,20,000 ಉದ್ಯೋಗಿಗಳ ಪೈಕಿ ಇನ್ಫೋಸಿಸ್ ಹೆಚ್ಚಿನ ಸಿಬ್ಬಂದಿಯನ್ನು ಭಾರತದಲ್ಲೇ ಹೊಂದಿದೆ. ತನ್ನ ಕ್ಯಾಂಪಸ್‌ಗಳಲ್ಲಿ ಉತ್ಪತ್ತಿಯಾಗುವ ಶೇ 100ರಷ್ಟು ಸಾವಯವ ತ್ಯಾಜ್ಯವನ್ನು (ಆಹಾರ ಮತ್ತು ತೋಟದ ತ್ಯಾಜ್ಯ) ಸಂಸ್ಕರಿಸುವ ಸಾಮರ್ಥ್ಯವನ್ನು ಕಚೇರಿ ಹೊಂದಿದೆ.

ಇದಕ್ಕಾಗಿ ಬಯೋಗ್ಯಾಸ್ (ಜೈವಿಕ ಅನಿಲ) ಸ್ಥಾವರಗಳು ಮತ್ತು ಸಾವಯವ ತ್ಯಾಜ್ಯ ಪರಿವರ್ತಕಗಳನ್ನು ಬಳಸಲಾಗುತ್ತಿದೆ. ಇಲ್ಲಿ ಉತ್ಪತ್ತಿಯಾಗುವ ಬಯೋಗ್ಯಾಸ್ ಅನ್ನು ಫುಡ್ ಕೋರ್ಟ್ ಅಡುಗೆಮನೆಗಳಲ್ಲಿ ಬಳಸಲಾಗುತ್ತದೆ ಮತ್ತು ಗೊಬ್ಬರವನ್ನು ಗಿಡಮರಗಳ ಪೋಷಣೆಗೆ ಬಳಸಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular