ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಸರಣಿ ಮುಂದುವರಿದಿದ್ದು, ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿಯಲ್ಲಿ ಇಂದು (ಮಾರ್ಚ್ 12) ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಗಣಪತಿ (49) ಎಂದು ಗುರುತಿಸಲಾಗಿದೆ. ಹೈಸ್ಕೂಲ್ ಪೈಸಾರಿ ನಿವಾಸಿಯಾದ ಇವರು ಇಂದು ಬೆಳಗ್ಗೆ ತಮ್ಮ ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದಾಗ ಏಕಾಏಕಿ ಸಲಗವೊಂದು ದಾಳಿ ನಡೆಸಿದೆ. ಆನೆಯ ಭೀಕರ ದಾಳಿಗೆ ಸಿಲುಕಿದ ಗಣಪತಿ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಗೆ ಕಳೆದ ಹತ್ತು ದಿನಗಳಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದೆ.
ಇತ್ತೀಚೆಗಷ್ಟೇ ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ಆನೆ ದಾಳಿಗೆ ಬಲಿಯಾಗಿದ್ದಳು.ಅದಾದ ಕೆಲವೇ ದಿನಗಳಲ್ಲಿ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಲಜಾಕ್ಷಿ ಎಂಬುವವರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.
ಜನರ ಆಕ್ರೋಶ: ಸರಣಿ ಸಾವುಗಳಿಂದ ಕೊಡಗಿನ ಜನತೆ ಕಂಗಾಲಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಕಾಫಿ ತೋಟಗಳು ಮತ್ತು ರಸ್ತೆ ಬದಿಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ಬಂದಿದೆ” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

