HomeUncategorized28 ಲಕ್ಷದ ಕಾರು ತಂದ ಆರೇ ದಿನಕ್ಕೆ ಇಂಜಿನ್ ಸೀಜ್: 15 ವರ್ಷಗಳ ಬಳಿಕ ಗ್ರಾಹಕನಿಗೆ...

28 ಲಕ್ಷದ ಕಾರು ತಂದ ಆರೇ ದಿನಕ್ಕೆ ಇಂಜಿನ್ ಸೀಜ್: 15 ವರ್ಷಗಳ ಬಳಿಕ ಗ್ರಾಹಕನಿಗೆ ಸಿಕ್ತು ನ್ಯಾಯ, ಪೂರ್ಣ ಹಣ ಮರಳಿಸಲು ಕೋರ್ಟ್ ಆದೇಶ

ಕೇರಳದ ಕೊಟ್ಟಾಯಂ ಮೂಲದ ಜೈಸನ್ ಲುಕೋಸ್ ಎಂಬುವವರು ತಾವು ಅನುಭವಿಸಿದ ಹದಿನೈದು ವರ್ಷಗಳ ಮಾನಸಿಕ ಹಿಂಸೆ ಮತ್ತು ಆರ್ಥಿಕ ನಷ್ಟಕ್ಕೆ ಕೊನೆಗೂ ನ್ಯಾಯ ಪಡೆದಿದ್ದಾರೆ. 2011ರಲ್ಲಿ ಸುಮಾರು 28 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದ ನಿಸ್ಸಾನ್ ಎಕ್ಸ್-ಟ್ರಯಲ್ (Nissan X-Trail) ಕಾರು ಕೇವಲ ಆರೇ ದಿನಗಳಲ್ಲಿ ಕೈಕೊಟ್ಟಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (NCDRC), ಗ್ರಾಹಕರಿಗೆ ಕಾರಿನ ಪೂರ್ಣ ಮೊತ್ತವಾದ 28 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸುವಂತೆ ಕಂಪನಿಗೆ ಆದೇಶಿಸಿದೆ.

ಘಟನೆಯ ಹಿನ್ನೆಲೆ ಮತ್ತು ತಾಂತ್ರಿಕ ದೋಷ

ಜೈಸನ್ ಅವರು ಜೂನ್ 2011ರಲ್ಲಿ ಈ ಪ್ರೀಮಿಯಂ ಎಸ್‌ಯುವಿ ಖರೀದಿಸಿದ್ದರು. ಆದರೆ ವಿತರಣೆಯಾದ 6 ದಿನಗಳಲ್ಲಿ ಕೇವಲ 780 ಕಿಲೋಮೀಟರ್ ಚಲಿಸುವಷ್ಟರಲ್ಲೇ ಕಾರು ಅರ್ಧ ಹಾದಿಯಲ್ಲೇ ಸ್ಥಗಿತಗೊಂಡಿತು. ಪದೇ ಪದೇ ರಿಪೇರಿ ಮಾಡಿಸಿದರೂ ಇಂಜಿನ್‌ನ ವಿಚಿತ್ರ ಶಬ್ದ ನಿಲ್ಲಲಿಲ್ಲ. ಕೊನೆಗೆ ಸೆಪ್ಟೆಂಬರ್ 2011ರಲ್ಲಿ ಸುಮಾರು 11,000 ಕಿಲೋಮೀಟರ್ ಓಡುವಷ್ಟರಲ್ಲಿ ಇಂಜಿನ್ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಈ ವೇಳೆ ಗ್ರಾಹಕರು ಪ್ರತಿ ತಿಂಗಳು 63,514 ರೂಪಾಯಿ ಇಎಂಐ ಪಾವತಿಸುತ್ತಿದ್ದರು, ಆದರೂ ಕಾರು ಮಾತ್ರ ಡೀಲರ್ ಗ್ಯಾರೇಜ್‌ನಲ್ಲಿ ಧೂಳು ಹಿಡಿಯುತ್ತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಪನಿಯ ವಾದ ಮತ್ತು ತಜ್ಞರ ವರದಿ

ನಿಸ್ಸಾನ್ ಕಂಪನಿಯು ತನ್ನ ಸಮರ್ಥನೆಯಲ್ಲಿ, ಗ್ರಾಹಕರು ಕಲಬೆರಕೆ ಡೀಸೆಲ್ ಬಳಸಿದ್ದರಿಂದ ಇಂಜಿನ್ ಹಾಳಾಗಿದೆ ಎಂದು ವಾದಿಸಿತ್ತು. ಅಲ್ಲದೆ ವಾರಂಟಿ ಅಡಿಯಲ್ಲಿ ಹೊಸ ಇಂಜಿನ್ ಅಳವಡಿಸಿಕೊಡುವುದಾಗಿ ಹೇಳಿತ್ತು. ಆದರೆ ಜೈಸನ್ ಅವರು ಇಡೀ ವಾಹನವೇ ದೋಷಪೂರಿತವಾಗಿದೆ ಎಂದು ಇಂಜಿನ್ ಬದಲಾವಣೆಗೆ ಒಪ್ಪದೆ ಪೂರ್ಣ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದರು. ವಿಚಾರಣೆ ನಡೆಸಿದ ಮೆಕ್ಯಾನಿಕಲ್ ಎಂಜಿನಿಯರಿಂಗ್ ತಜ್ಞರ ಸಮಿತಿಯು, ಇದು ಇಂಜಿನ್‌ನ ವಿನ್ಯಾಸದಲ್ಲಿರುವ ಮೂಲಭೂತ ದೋಷವೇ ಹೊರತು ಇಂಧನದ ಸಮಸ್ಯೆಯಲ್ಲ ಎಂದು ಸ್ಪಷ್ಟಪಡಿಸಿತು.

ರಾಷ್ಟ್ರೀಯ ಆಯೋಗದ ಅಂತಿಮ ತೀರ್ಪು

ಕೇರಳ ರಾಜ್ಯ ಗ್ರಾಹಕ ಆಯೋಗವು ಈ ಹಿಂದೆ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ರಾಷ್ಟ್ರೀಯ ಆಯೋಗವು, ಕಂಪನಿಯ ಸೇವೆಯಲ್ಲಿ ಲೋಪವಿರುವುದು ನಿಜ ಎಂದು ಆದೇಶಿಸಿದೆ. “ವಾಹನ ಖರೀದಿಸಿದ ಆರನೇ ದಿನಕ್ಕೇ ಪದೇ ಪದೇ ಗ್ಯಾರೇಜ್ ಸೇರುತ್ತಿರುವುದು ಅದರ ತಯಾರಿಕೆಯಲ್ಲೇ ದೋಷವಿರುವುದನ್ನು ತೋರಿಸುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆದರೆ, ಕಂಪನಿ ಇಂಜಿನ್ ಬದಲಾಯಿಸಿಕೊಡುತ್ತೇವೆ ಎಂದಾಗ ಗ್ರಾಹಕರು ಒಪ್ಪದ ಕಾರಣ, ಬಡ್ಡಿ ಮತ್ತು ಪರಿಹಾರದ ಮೊತ್ತವನ್ನು ಕಡಿತಗೊಳಿಸಿ ಕೇವಲ ಅಸಲು ಹಣ 28 ಲಕ್ಷ ರೂಪಾಯಿಗಳನ್ನು ಎರಡು ತಿಂಗಳೊಳಗೆ ಮರಳಿಸಲು ಸೂಚಿಸಿದೆ.

15 ವರ್ಷಗಳಿಂದ ಬಳಸದೆ ಬಿದ್ದಿರುವ ಈ ಕಾರು ಈಗ ಕೇವಲ ಗುಜರಿ ಬೆಲೆಗೆ ಸಮಾನವಾಗಿದ್ದರೂ, ಗ್ರಾಹಕನ ಹಕ್ಕನ್ನು ಎತ್ತಿ ಹಿಡಿಯುವಲ್ಲಿ ಈ ತೀರ್ಪು ಮಹತ್ವದ್ದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular