ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ಅಡುಗೆ ಅನಿಲದ (LPG) ತೀವ್ರ ಅಭಾವ ಉಂಟಾಗಿದ್ದು, ಇದರ ಬಿಸಿ ಈಗ ಹೋಟೆಲ್ ಗ್ರಾಹಕರಿಗೆ ತಟ್ಟುತ್ತಿದೆ. ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ತಿಂಡಿ ತಿಂದ ಗ್ರಾಹಕನಿಗೆ ಬಿಲ್‌ನಲ್ಲಿ ಹೆಚ್ಚುವರಿಯಾಗಿ 30 ರೂಪಾಯಿ ‘ಗ್ಯಾಸ್ ಸಪ್ಲೈ ಚಾರ್ಜ್’ ವಿಧಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ನಗರದ ಪಿಜಿಯೊಂದರಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ತಿಂಡಿಗಾಗಿ ಸ್ಥಳೀಯ ‘ಮಿಸ್ಟರ್ ಆಂಧ್ರ ಮೀಲ್ಸ್’ (Mr. Andhra Meals) ಹೋಟೆಲ್‌ಗೆ ತೆರಳಿದ್ದರು. ತಿಂಡಿ ತಿಂದ ನಂತರ ಅವರಿಗೆ ನೀಡಲಾದ ಬಿಲ್‌ನಲ್ಲಿ ತಿಂಡಿಯ ಬೆಲೆಯ ಜೊತೆಗೆ ಪ್ರತ್ಯೇಕವಾಗಿ 30 ರೂ.ಗಳನ್ನು ‘ಗ್ಯಾಸ್ ಸಪ್ಲೈ ಚಾರ್ಜ್’ ಎಂದು ಸೇರಿಸಲಾಗಿತ್ತು. ಇದನ್ನು ಕಂಡು ಹೆದರಿ ಹೋದ ಗ್ರಾಹಕರು ಆ ಬಿಲ್ ಅನ್ನು ಫೋಟೋ ತೆಗೆದು ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಾರ್ವಜನಿಕರ ಆಕ್ರೋಶ : ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಲ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಇದು ಹಗಲು ದರೋಡೆ, ಗ್ಯಾಸ್ ಅಭಾವವನ್ನು ನೆಪ ಮಾಡಿಕೊಂಡು ಸಾರ್ವಜನಿಕರನ್ನು ಲೂಟಿ ಮಾಡಲಾಗುತ್ತಿದೆ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದನ್ನು “ದೊಡ್ಡ ಸ್ಕ್ಯಾಮ್” ಎಂದು ಕಿಡಿಕಾರಿದ್ದಾರೆ.
ಕೊಲ್ಲಿ ರಾಷ್ಟ್ರಗಳ ಯುದ್ಧದ ಎಫೆಕ್ಟ್‌ನಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದರ ಬೆನ್ನಲ್ಲೇ ರೈಲ್ವೇ ಕೇಟರಿಂಗ್ ಮತ್ತು ಕಲ್ಯಾಣ ಮಂಟಪಗಳಲ್ಲೂ ಗ್ಯಾಸ್ ಸಮಸ್ಯೆ ಎದುರಾಗಿದ್ದು, ಕೆಲವು ಕಡೆಗಳಲ್ಲಿ ಮದುವೆ ಮನೆಯವರೇ ಸಿಲಿಂಡರ್ ತರಬೇಕು ಎಂಬ ನಿಯಮ ಹೇರಲಾಗಿದೆ ಎನ್ನಲಾಗುತ್ತಿದೆ.

