ವಾಷಿಂಗ್ಟನ್: ಅಮೆರಿಕ, ಇಸ್ರೇಲ್- ಇರಾನ್ ನಡುವೆ ಸಮರ ಮುಂದುವರೆದಿದೆ. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಯುದ್ಧದ ವಿಷಯ, ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇರಾನ್ ಮೇಲಿನ ದಾಳಿ ನಿಲ್ಲಿಸುವಂತೆ ಪುಟಿನ್ ಪ್ರಸ್ತಾಪಿಸಿದ್ದಾರೆ. ಶೀಘ್ರವೇ ಯುದ್ಧ ಕೊನೆಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇದೇ ವೇಳೆ ಉಕ್ರೇನ್ – ರಷ್ಯಾ ಯುದ್ಧದ ವಿಚಾರದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಉಭಯ ದೇಶಗಳು ಶಾಂತಿಯುತ ಮಾತುಕತೆ ನಡೆಸುವಂತೆ ಟ್ರಂಪ್ ಸಲಹೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಇದನ್ನು ಕ್ರೆಮ್ಲಿನ್ “ಪ್ರಾಮಾಣಿಕ ಮತ್ತು ವ್ಯವಹಾರಿಕ” ಎಂದು ಬಣ್ಣಿಸಿದೆ. ಈ ಸಂಭಾಷಣೆ ಸುಮಾರು ಒಂದು ಗಂಟೆ ಕಾಲ ನಡೆಯಿತು.
ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂದುವರೆದ ಅಮೆರಿಕ ಮತ್ತು ಇಸ್ರೇಲ್, ಇರಾನ್ ನಿರಂತರ ಯುದ್ಧದ ಬಗ್ಗೆ ಚರ್ಚಿಸಿದ ನಾಯಕರು ಯುದ್ಧ ನಿಲ್ಲಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

