ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆ ನೌಕರರು ನಾಳೆಯಿಂದ ಮುಷ್ಕರ ಕೈಗೊಂಡಿದ್ದಾರೆ.
ಮಾರ್ಚ್ 11ರ ಬುಧವಾರದಿಂದ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ನೌಕರರು, ಹೊರ ರೋಗಿಗಳ ವಿಭಾಗ(ಒಪಿಡಿ) ಕರ್ತವ್ಯ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲಿದ್ದಾರೆ. ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಬೇಡಿಕೆ ಈಡೇರಿಸುವಂತೆ ಎರಡು ವಾರದ ಹಿಂದೆಯೇ ಮುಷ್ಕರ ನಡೆಸುವ ನಿರ್ಧಾರ ಪ್ರಕಟಿಸಲಾಗಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರ ಕೈಗೊಳ್ಳಲಾಗಿದೆ. ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದವರು ಕೂಡ ಬೆಂಬಲ ನೀಡಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ಮುಷ್ಕರ ನಡೆಸಲಾಗುವುದು.
ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾದರಿಯಲ್ಲಿ ವೇತನ ಕೊಡಬೇಕು. ಗುತ್ತಿಗೆ ವೈದ್ಯರು, ನೌಕರರು, ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಭದ್ರತೆ ನೀಡಿ ವೇತನ ಹೆಚ್ಚಳ ಮಾಡಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ 6,000 ನೌಕರರಿಗೆ ವೇತನ ಭತ್ಯೆ ಕೊಡಬೇಕು. ಖಾಲಿ ಇರುವ 39 ಸಾವಿರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡಿ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿ ಮುಷ್ಕರ ಕೈಗೊಳ್ಳಲಾಗಿದೆ.
ಮಾರ್ಚ್ 15 ರವರೆಗೆ ವೈದ್ಯರು ಮತ್ತು ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ತುರ್ತು ಕರ್ತವ್ಯದಲ್ಲಿ ಭಾಗವಹಿಸಲಿದ್ದಾರೆ. ನಂತರವೂ ಸರ್ಕಾರದಿಂದ ಸ್ಪಂದನೆ ಸಿಗದಿದ್ದರೆ ಮಾರ್ಚ್ 16ರಿಂದ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ವೈದ್ಯರು ನಿರ್ಧರಿಸಿದ್ದಾರೆ.

