ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಘೋರ ದುರಂತ ಸಂಭವಿಸಿದ್ದು, ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ಬಿದ್ದ ಪರಿಣಾಮ ಕೆಲಸ ಮಾಡುತ್ತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಏನಿದು ಘಟನೆ
ಗ್ರಾಮದ ನಿವಾಸಿಗಳಾದ ದ್ಯಾವಪ್ಪ ಸೂಗುರು (38) ಮತ್ತು ಅವರ ಪತ್ನಿ ಶಿವಮ್ಮ (32) ಮೃತಪಟ್ಟ ದುರ್ದೈವಿಗಳು. ಈ ದಂಪತಿ ಗೌಂಡಿ ಕೆಲಸ ಮಾಡಿಕೊಂಡಿದ್ದರು. ಪಕ್ಕದ ಮನೆಯೊಂದರಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ, ಏಕಾಏಕಿ ಮೆಟ್ಟಿಲುಗಳ ಭಾಗ ಕುಸಿದು ಇವರ ಮೇಲೆ ಬಿದ್ದಿದೆ. ಪರಿಣಾಮವಾಗಿ ಗಂಭೀರ ಗಾಯಗೊಂಡ ದಂಪತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಅವೈಜ್ಞಾನಿಕ ನಿರ್ಮಾಣವೇ ಕಾರಣ ? ಪಿಲ್ಲರ್ ನೀಡದೆ ಅವೈಜ್ಞಾನಿಕವಾಗಿ ಮೆಟ್ಟಿಲುಗಳನ್ನು ನಿರ್ಮಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಹಟ್ಟಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

