ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣದ ಉಪ ಚುನಾವಣೆ ಎದುರಾಗಿದೆ. ಆದರೆ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಭಾರೀ ಪೈಪೋಟಿ ಉಂಟಾಗಿದೆ. ಇದು ಸಿದ್ದರಾಮಯ್ಯ ಸಂಪುಟದ ಸಚಿವರ ನಡುವಿನ ವಾಕ್ಸಮರಕ್ಕೆ ಸಹ ಸಾಕ್ಷಿಯಾಗಿದೆ.
ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ಪುತ್ರ ಸಮರ್ಥ ಶಾಮನೂರು ಕಣಕ್ಕಿಳಿಸಲು ಬಯಸಿದ್ದಾರೆ. ಆದರೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮುಸ್ಲಿಂ ಸಮಯದಾಯಕ್ಕೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ವಿಚಾರಕ್ಕೆ ಜಮೀರ್ ಅಹ್ಮದ್ ಖಾನ್ ವಿರುದ್ಧ ಎಸ್.ಎಸ್.ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಕರ್ನಾಟಕ ಬಿಜೆಪಿ ಹಂಚಿಕೊಂಡಿದ್ದು, ‘ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಸಚಿವರಾಗಿ ತಮ್ಮ ಇಲಾಖೆಯ ಕೆಲಸ ಕಾರ್ಯಗಳನ್ನು ಸಂಪೂರ್ಣ ಮರೆತಿರುವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಜಮೀರ್ ಅಹಮದ್ ಖಾನ್ ಅವರು ಈಗ ಜಂಗಿಕುಸ್ತಿಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದೆ.
‘ಕ್ಷೇತ್ರದ ಜನರು ಸಮಸ್ಯೆಗಳಿಂದ ಪರದಾಡುತ್ತಿದ್ದರೆ, ಇತ್ತ ಇಬ್ಬರು ಸಚಿವರು ಮಾತ್ರ ಸ್ವಾರ್ಥದ ಟಿಕೆಟ್ಗಾಗಿ ಕಚ್ಚಾಟದಲ್ಲಿ ತೊಡಗಿರುವುದು ನಾಚಿಕೆಗೇಡು’ ಎಂದು ಬಿಜೆಪಿ ಟೀಕಿಸಿದೆ.
ಮಲ್ಲಿಕಾರ್ಜುನ ಹೇಳಿದ್ದೇನು?: ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಇದು ನಮ್ಮ ಕ್ಷೇತ್ರ ಅವನ್ಯಾರು ಬಂದು ಇಲ್ಲಿ ಮಾತಾನಾಡೋಕೆ?, ಇವೆಲ್ಲ ಸರಿ ಇರುವುದಿಲ್ಲ. ಕರೆದಾಗ ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.
ಈ ಮೂಲಕ ಎಸ್.ಎಸ್.ಮಲ್ಲಿಕಾರ್ಜುನ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಕೊಡಿಸಲು ಪ್ರಯತ್ನ ನಡೆಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ಗೆ ತಿರುಗೇಟು ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವ ಕಾರಣ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ಗಾಗಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ದಾವಣಗೆರೆ ದಕ್ಷಿಣದಲ್ಲಿ ಸುಮಾರು 80,000 ಮುಸ್ಲಿಂ ಮತಗಳಿಗೆ ಆದ್ದರಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಡಲಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ಗಾಗಿ ಸೈಯದ್ ಸೈಫುಲ್ಲಾ, ಅವರ ಪುತ್ರ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಎಂಎಲ್ಸಿ ಅಬ್ದುಲ್ ಜಬ್ಬಾರ್ ಹಾಗೂ ಅಯೂಬ್ ಪೈಲ್ವಾನ್ ಇನ್ನಿತರರು ಆಕಾಂಕ್ಷಿಗಳಾಗಿದ್ದಾರೆ.
ಆದರೆ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು ಕಣಕ್ಕಿಳಿಸಿ ಕ್ಷೇತ್ರವನ್ನು ಕುಟುಂಬದಲ್ಲೇ ಉಳಿಸಿಕೊಳ್ಳುವ ತಂತ್ರ ರೂಪಿಸಿದ್ದಾರೆ. ಸಮರ್ಥ ಈಗಾಗಲೇ ಕ್ಷೇತ್ರದಲ್ಲಿ ಸಂಚಾರವನ್ನು ನಡೆಸುತ್ತಿದ್ದಾರೆ.
ಎಸ್.ಎಸ್.ಮಲ್ಲಿಕಾರ್ಜುನ ಸಚಿವರು, ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಸಂಸದೆ. ಆದ್ದರಿಂದ ಶಾಮನೂರು ಕುಟುಂಬಕ್ಕೆ ಟಿಕೆಟ್ ಬೇಡ. ಬೇರೆ ಅಭ್ಯರ್ಥಿಯನ್ನು ಹುಡುಕಿ, ಅವರಿಗೆ ಟಿಕೆಟ್ ಕೊಡಿ ಎಂಬುದು ಬೇಡಿಕೆಯಾಗಿದೆ.
ಕೇಂದ್ರ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ದಾವಣಗೆರೆ ದಕ್ಷಿಣ ಉಪ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ. ಕಾಂಗ್ರೆಸ್ ಮಾತ್ರವಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಹ ಇನ್ನೂ ಉಪ ಚುನಾವಣೆ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

