ಬೆಂಗಳೂರು: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಮತ್ತು ಎಚ್.ವೈ. ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಯ ಆಯ್ಕೆ ಮತ್ತು ಗೆಲುವಿಗೆ ಪೂರಕವಾದಂತಹ ವರದಿ ನೀಡಲು ಉಸ್ತುವಾರಿ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಕುರಿತಾಗಿ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ಸಮಿತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಇವರೊಂದಿಗೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಚಿವರಾದ ಕೆ.ಎಚ್. ಮುನಿಯಪ್ಪ, ಜಮೀರ್ ಅಹ್ಮದ್ ಖಾನ್, ಈಶ್ವರ ಖಂಡ್ರೆ, ಕೃಷ್ಣ ಬೈರೇಗೌಡ, ಶರಣ್ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ತನ್ವೀರ್ ಸೇಟ್, ವಿ.ಆರ್. ಸುದರ್ಶನ್, ಹೆಚ್.ಎಂ. ರೇವಣ್ಣ, ಎಚ್. ಆಂಜನೇಯ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಬಾಗಲಕೋಟೆ ಉಪಚುನಾವಣೆ ಉಸ್ತುವಾರಿ ಸಮಿತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ವಸಂತಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಬೈರತಿ ಸುರೇಶ್, ರಹೀಂ ಖಾನ್, ರಾಜಶೇಖರ ಪಾಟೀಲ್, ವಿಜಯಾನಂದ ಕಾಶಪ್ಪನವರ್, ಎಫ್.ಎಚ್. ಜಕ್ಕಪ್ಪನವರ್, ಬಸವನಗೌಡ ಬಾದರ್ಲಿ, ಸೋಮಣ್ಣ ಬೇವಿನಮರದ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಸಮಿತಿಗಳು ಸಂಬಂಧಿಸಿದ ಕ್ಷೇತ್ರಗಳಲ್ಲಿ ಪಕ್ಷದ ಸಂಭಾವ್ಯ ಅಭ್ಯರ್ಥಿಯನ್ನು ಕೆಪಿಸಿಸಿಗೆ ಶಿಫಾರಸು ಮಾಡಲು ಮತ್ತು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸಚಿವರು, ಶಾಸಕರು, ಸಂಸದರು, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರು ಸೇರಿದಂತೆ ಎಲ್ಲಾ ನಾಯಕರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣವೇ ಕೆಪಿಸಿಸಿಗೆ ವರದಿ ಸಲ್ಲಿಸುವಂತೆ ಡಿ.ಕೆ. ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

