ನಿನ್ನೆ ( ಮಾರ್ಚ್ 8 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಬೃಹತ್ ಗೆಲುವು ದಾಖಲಿಸಿ ಮೂರನೇ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಹೊಸ ದಾಖಲೆ ಬರೆಯಿತು
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನ್ಯೂಜಿಲೆಂಡ್ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲ್‌ಔಟ್ ಆಯಿತು.
ಬೌಲಿಂಗ್‌ನಲ್ಲಿ ಮುಗ್ಗರಿಸಿದ್ದ ನ್ಯೂಜಿಲೆಂಡ್ ಬ್ಯಾಟಿಂಗ್‌ನಲ್ಲೂ ಸಹ ಅದೇ ರೀತಿ ನೆಲಕಚ್ಚಿತು. ತಂಡದ ಪರ ಟಿಮ್ ಸೈಫರ್ಟ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನೂ ಸಹ ಆಸರೆಯಾಗಲಿಲ್ಲ. ಮಧ್ಯದಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ ತುಸು ರನ್ ಗಳಿಸಿದರಾದರೂ ಅದು ಏಕದಿನ ಮಾದರಿಯಲ್ಲಿತ್ತು. ಉಳಿದ ಆಟಗಾರರಾರೂ 20 ರನ್ ಮುಟ್ಟದೆಯೇ ಮಕಾಡೆ ಮಲಗಿದರು.
ಇನ್ನು ಪಂದ್ಯದ ವೇಳೆ ಉಭಯ ತಂಡಗಳ ಇಬ್ಬರು ಆಟಗಾರರು ಕಿರಿಕ್ ಮಾಡಿಕೊಂಡ ಪ್ರಸಂಗವೂ ಸಹ ನಡೆಯಿತು. ಕಿವೀಸ್‌ನ ಆಟಗಾರ ಡ್ಯಾರಿಲ್ ಮಿಚೆಲ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ 11ನೇ ಓವರ್ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ ಎಸೆದ ಎರಡನೇ ಹಾಗೂ ಮೂರನೇ ಎಸೆತಕ್ಕೆ ಸಿಕ್ಸರ್ ಬಾರಿಸಿದರು.
ಬಳಿಕ ಇದೇ ಓವರ್‌ನ ಐದನೇ ಎಸೆತಕ್ಕೆ ಮಿಚೆಲ್ ಬ್ಯಾಟ್ ತಾಗಿಸಿ ಚೆಂಡು ಅರ್ಷ್‌ದೀಪ್ ಕೈ ತಲುಪಿತು. ಚೆಂಡನ್ನು ಪಡೆದ ಅರ್ಷ್‌ದೀಪ್ ವಿಕೆಟ್‌ಗೆ ಹೊಡೆಯಲು ಯತ್ನಿಸಿದಾಗ ಅದು ಮಿಚೆಲ್ ಕಾಲಿಗೆ ಬಡಿಯಿತು. ಇದರಿಂದ ಕೋಪಕ್ಕೊಳಗಾದ ಮಿಚೆಲ್ ಅರ್ಷ್‌ದೀಪ್ ಸಿಂಗ್ ವಿರುದ್ಧ ಕಿರುಚಾಡುತ್ತಾ ನಿಂದಿಸಲಾರಂಭಿಸಿದರು.
ಕೂಡಲೇ ಅಂಪೈರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಅರ್ಷ್‌ದೀಪ್ ಸಿಂಗ್ ಮಿಚೆಲ್ ಬಳಿ ಕ್ಷಮೆಯಾಚಿಸಿದರು.

