ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ 369 ವಾರ್ಡ್ ಗಳಿಗೆ ಅಂತಿಮ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಶನಿವಾರ ಬಿಡುಗಡೆ ಮಾಡಿದೆ.
ಇದರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ಸನಿಹವಾದಂತಾಗಿದೆ. ಈ ಹಿಂದೆ ಕರಡುಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿದ್ದ ನಗರಾಭಿವೃದ್ಧಿ ಇಲಾಖೆ ಸರ್ಕಾರದಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು ಸರ್ಕಾರ ಒಪ್ಪಿಕೊಂಡ ಬಳಿಕ ಮೀಸಲಾತಿ ಪ್ರಕಟಿಸಲಾಗಿದೆ.
ಮಾರ್ಗಸೂಚಿ ಅನುಸಾರ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು, ಮಹಿಳಾ ಮೀಸಲಾತಿ, ಸಾಮಾನ್ಯ ಸ್ಥಾನಗಳ ಪ್ರಮಾಣವನ್ನು ಕಾಯ್ದುಕೊಂಡು ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಸರ್ಕಾರ ಒಪ್ಪಿಕೊಂಡ ನಂತರ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಪೂರ್ವ ಮಹಾನಗರ ಪಾಲಿಕೆಯಲ್ಲಿ 50 ವಾರ್ಡ್, ಪಶ್ಚಿಮ ನಗರ ಪಾಲಿಕೆಯಲ್ಲಿ 112, ಕೇಂದ್ರ ನಗರ ಪಾಲಿಕೆಯಲ್ಲಿ 63, ಉತ್ತರ ಪಾಲಿಕೆಯಲ್ಲಿ ಒಟ್ಟು 72 ವಾರ್ಡ್ ಗಳು ಇವೆ.ದಕ್ಷಿಣ ಪಾಲಿಕೆಯಲ್ಲಿ 72 ವಾರ್ಡ್ ಗಳು ಇದ್ದು, ಇವುಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ, ಮಹಿಳಾ ಮೀಸಲಾತಿ ಪ್ರಕಟಿಸಲಾಗಿದೆ.

