ಬೆಂಗಳೂರು: ಇನ್ಮುಂದೆ ಸರ್ಕಾರಿ ರಜೆ ದಿನವೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಡಿ.ಸಿ.ಆರ್.ಇ. ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸಲಿವೆ.
ಸಾಮಾನ್ಯ ಪೊಲೀಸ್ ಠಾಣೆಗಳ ರೀತಿಯಲ್ಲಿ ಡಿ.ಸಿ.ಆರ್.ಇ. ಪೊಲೀಸ್ ಠಾಣೆಗಳು ಸರ್ಕಾರಿ ರಜೆ ದಿನವೂ ಕಾರ್ಯನಿರ್ವಹಿಸಲಿವೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಪತ್ರ ಬರೆದಿದ್ದು, ಈ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ಜಾತಿ ನಿಂದನೆ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ತ್ವರಿತವಾಗಿ ಪ್ರಕರಣಗಳನ್ನು ನಿಭಾಯಿಸುವ ಉದ್ದೇಶದಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಘಟಕವನ್ನು ವಿಶೇಷ ಪೊಲೀಸ್ ಠಾಣೆ ಎಂದು ಅಧಿಸೂಚಿಸಲಾಗಿದೆ. ಹೀಗಾಗಿ ಸರ್ಕಾರಿ ರಜೆ ದಿನದ ವೇಳೆ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.

