ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕರ್ನಾಟಕ ಬಜೆಟ್-2026 ಮಂಡಿಸಿದರು. ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷ ತಡೆಯಲು ಕೈಗೊಂಡ ಕ್ರಮಗಳ ಕುರಿತು ಘೋಷಣೆ ಮಾಡಿದರು. ಅರಣ್ಯ ಇಲಾಖೆ ನೇಮಕಾತಿಗಳ ಕುರಿತು ಘೋಷಿಸಿದರು.
ಸಿದ್ದರಾಮಯ್ಯ ಈ ಬಾರಿ 4.49 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಬೆಂಗಳೂರು ನಗರದಲ್ಲಿ ಚಿರತೆಗಳ ಹಾವಳಿ ತಡೆಯಲು ಹೊಸ ಕ್ರಮವನ್ನು ಘೋಷಣೆ ಮಾಡಿದರು. ಅರಣ್ಯ ಇಲಾಖೆಗೆ ಹಲವಾರು ಹೊಸ ಕ್ರಮ ಪ್ರಕಟಿಸಿದರು.
ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಹೊಸದಾಗಿ 3 ಆನೆ ಕಾರ್ಯಪಡೆಗಳು ಮತ್ತು 1 ಹೊಸ ಚಿರತೆ ಕಾರ್ಯಪಡೆಯ ರಚನೆ ಮಾಡಲಾಗುತ್ತದೆ. ಈ ಕಾರ್ಯಪಡೆಗಳಿಗಾಗಿ ಹೊಸದಾಗಿ 358 ಹುದ್ದೆಗಳ ಸೃಜನೆ ಮಾಡಲಾಗುತ್ತದೆ ಎಂದರು.
ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಸೆರೆಹಿಡಿಯಲ್ಪಟ್ಟ ಸಂದರ್ಭಗಳಲ್ಲಿ ಅವುಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ‘ಚಿರತೆ ಪುನರ್ವಸತಿ ಕೇಂದ್ರ’ ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಿದರು.
ಅರಣ್ಯ ಇಲಾಖೆ ಘೋಷಣೆಗಳು
- ಮಾನವ-ವನ್ಯ ಪ್ರಾಣಿ ಸಂಘರ್ಷ ನಿವಾರಣೆಯು ಅತೀ ಮುಖ್ಯವಾದ ಕಾರ್ಯವಾಗಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 1,044 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
- ಮಾನವ–ವನ್ಯಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ʻಕರ್ನಾಟಕ ಮಾನವ–ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆʼಯನ್ನು ಅನುಷ್ಠಾನಗೊಳಿಸಲು ಮುಂದಿನ 5 ವರ್ಷದಲ್ಲಿ 1,500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
- ಉದ್ಯಾನ ನಗರಿ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನ ಒಟ್ಟು 5,676 ಎಕರೆ ವಿಸ್ತೀರ್ಣದ ಪ್ರದೇಶವನ್ನು ʻಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲುʼ ಎಂದು ಘೋಷಿಸಿದ್ದು, ಈ ಪ್ರದೇಶದ ಆವಾಸಸ್ಥಾನ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.
- ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000 ಹುದ್ದೆಗಳನ್ನು 2026-27ನೇ ಆರ್ಥಿಕ ವರ್ಷದಲ್ಲಿ ಭರ್ತಿ ಮಾಡುವ ಮೂಲಕ ಇಲಾಖೆಯನ್ನು ಸಬಲೀಕರಣಗೊಳಿಸಲಾಗುವುದು.
- ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟ ಉದ್ಯಾನವನದ ಕಡೆಗೆ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರ ಅನುಕೂಲತೆಗಾಗಿ PPP ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು.
- ರಾಷ್ಟ್ರೀಯ ಅರಣ್ಯ ನೀತಿಯಂತೆ ರಾಜ್ಯದ ಶೇ.10 ಕ್ಕಿಂತ ಕಡಿಮೆ ಅರಣ್ಯ ಹೊದಿಕೆ ಹೊಂದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ, 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ KKRDB ವತಿಯಿಂದ 50 ಕೋಟಿ ರೂ. ಸೇರಿದಂತೆ ಒಟ್ಟು 150 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
- ಬೆಂಗಳೂರು ಉತ್ತರ ತಾಲ್ಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶವನ್ನು ಶ್ವಾಸತಾಣವನ್ನಾಗಿ ಪರಿವರ್ತಿಸಿ, ʻಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನʼವನ್ನು ನಿರ್ಮಿಸಲಾಗುವುದು.
- ವಾಯು ಗುಣಮಟ್ಟ ಮಾಪನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 15 ಹೊಸ ನಿರಂತರ ಪರಿವೇಷ್ಠಿಕ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
- ಕರ್ನಾಟಕದ ಪ್ರಸಿದ್ಧ ಪರಿಸರವಾದಿ ವೃಕ್ಷಮಾತೆ ʻಸಾಲುಮರದ ತಿಮ್ಮಕ್ಕʼ ಇವರ ಸ್ಮರಣಾರ್ಥ ಹುಲಿಕಲ್-ಕುದೂರು ಹತ್ತಿರ ಸ್ಮಾರಕವನ್ನು ನಿರ್ಮಿಸಲಾಗುವುದು.

