ನಿನ್ನೆ ( ಮಾರ್ಚ್ 5 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಗೆಲುವನ್ನು ದಾಖಲಿಸಿ ಫೈನಲ್ ತಲುಪಿತು.
ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್, ಇಶಾನ್ ಕಿಶನ್, ಶಿವಮ್ ದುಬೆ ಬೆಂಕಿ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಬಾರಿಸಿ ಇಂಗ್ಲೆಂಡ್‌ಗೆ 254 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾಗಿ ಕೊನೆಯ ಓವರ್‌ವರೆಗೆ ಪಂದ್ಯವನ್ನು ಕೊಂಡೊಯ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿತು.
ಈ ಮೂಲಕ ಇಂಗ್ಲೆಂಡ್ ಫೈನಲ್ ಪ್ರವೇಶಿಸುವ ಅವಕಾಶ ಕೈತಪ್ಪಿಸಿಕೊಂಡಿದ್ದು, ಪಂದ್ಯ ಮುಕ್ತಾಯವಾದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ತಂಡದ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ. 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 89 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸಂಜು ಸ್ಯಾಮ್ಸನ್ ಕೇವಲ 15 ರನ್ ಗಳಿಸಿದ್ದಾಗ ತಾವೇ ಕೈಗೆ ಬಂದ ಕ್ಯಾಚ್ ಬಿಟ್ಟು ತಪ್ಪು ಮಾಡಿದ್ದನ್ನು ಹ್ಯಾರಿ ಬ್ರೂಕ್ ಒಪ್ಪಿಕೊಂಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಹ್ಯಾರಿ ಬ್ರೂಕ್ ‘ಪಿಚ್‌ನಲ್ಲಿ ಹಿಡಿತವಿರುವ ಕಾರಣ ಸ್ಪಿನ್ ಕೆಲಸ ಮಾಡಲಿದೆ ಎಂದುಕೊಂಡೆವು. ಆದರೆ ಆ ಯೋಜನೆ ಕೆಲಸ ಮಾಡಲಿಲ್ಲ. ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಕೆಲಸ ಮಾಡಿದರು. ಆದರೆ ನಮ್ಮ ತಂಡದ ಆಟಗಾರರು ಈ ದಿನ ಒಳ್ಳೆಯ ಪೈಪೋಟಿ ನೀಡಿದರು ಎಂಬುದನ್ನು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ. ಸಂಜು ಸ್ಯಾಮ್ಸನ್ ಕ್ಯಾಚ್ ಬಿಟ್ಟು ನಾನು ದೊಡ್ಡ ತಪ್ಪು ಮಾಡಿದೆ ಎಂಬುದನ್ನು ಕೈ ಮೇಲೆತ್ತಿ ಒಪ್ಪಿಕೊಳ್ಳುತ್ತೇನೆ. ಅಂತಿಮವಾಗಿ ಅದು ನಮಗೆ ಬೆಲೆ ತೆರುವಂತೆ ಮಾಡಿದೆ. ಬೌಲಿಂಗ್‌ನಲ್ಲಿ ಅಲ್ಲೊಂದು ಇಲ್ಲೊಂದು ತಪ್ಪುಗಳಾದವು. ಭಾರತದ ಬ್ಯಾಟ್ಸ್‌ಮನ್‌ಗಳು ವಿಶ್ವದಲ್ಲೇ ಅತ್ಯುತ್ತಮರು. ಅವರು ವಿರುದ್ಧ ಈ ರೀತಿ ತಪ್ಪು ಮಾಡಿದರೆ ಚೆಂಡು ಬೌಂಡರಿಯಿಂದಾಚೆ ಬೀಳುತ್ತದೆ. ಆದಾಗ್ಯೂ ದೊಡ್ಡ ಪೈಪೋಟಿ ಕೊಟ್ಟ ನಾವು ಕೊನೆಯಲ್ಲಿ ಸರಿಯಾದ ಫಲಿತಾಂಶ ಪಡೆಯಲಾಗಲಿಲ್ಲ. ಜೇಕಬ್ ಬೆಥೆಲ್ ನಂಬಲಸಾಧ್ಯ. ಆತ ತನ್ನ ಕೆರಿಯರ್‌ನಲ್ಲಿ ದೊಡ್ಡ ಹಣ ಹಾಗೂ ಒಳ್ಳೆಯ ಕೆರಿಯರ್ ಪಡೆಯಲಿದ್ದಾನೆ’ ಎಂದು ಹೇಳಿಕೊಂಡರು.

