ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಮಾರ್ಚ್ 10ರ ಬಳಿಕ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ, ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ದಾವಣಗೆರೆಗೆ ಗುರುವಾರ ಭೇಟಿ ನೀಡಿದ್ದರು. ದಾವಣಗೆರೆಯಲ್ಲಿ ಅವರು ನಾಯಕರು, ಕಾರ್ಯಕರ್ತರ ಸಭೆಯನ್ನು ಸಹ ನಡೆಸಿದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಕುರಿತು ಅವರು ಪೋಸ್ಟ್ ಹಾಕಿದ್ದು, ಸಂಘಟನೆಯ ಧ್ಯೇಯ, ಕಾರ್ಯಕರ್ತರೇ ಶಕ್ತಿ, ಜನಸೇವೆಯೇ ಗುರಿ. ಹಿರಿಯ ನಾಯಕರು, ಪಕ್ಷದ ರಾಜ್ಯ ಉಸ್ತುವಾರಿ ಶ್ರೀ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರೊಂದಿಗೆ ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಮ್ಮ ನಿಷ್ಠಾವಂತ ಕಾರ್ಯಕರ್ತರು ಮತ್ತು ವಿಸ್ತಾರಕರನ್ನು ಭೇಟಿ ಮಾಡಿ, ಅವರ ಸಮರ್ಪಿತ ಸೇವೆಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು. ನಮ್ಮೆಲ್ಲಾ ಕಾರ್ಯಕರ್ತರ ಪರಿಶ್ರಮ, ಉತ್ಸಾಹವೇ ಪಕ್ಷದ ಗೆಲುವಿಗೆ ಮುನ್ನುಡಿಯಾಗಿದೆ’ ಎಂದು ಹೇಳಿದ್ದಾರೆ.
ಅಭ್ಯರ್ಥಿ ಬಗ್ಗೆ ಸುಳಿವು: ರಾಧಾ ಮೋಹನ್ ದಾಸ್ ಅಗರ್ವಾಲ್ ದಾವಣಗೆರೆಯಲ್ಲಿ ಗುರುವಾರ ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ ಕುರಿತು ಸುಳಿವು ನೀಡಿದ್ದಾರೆ. ಅವರು ಕಾರ್ಯಕ್ರಮದಲ್ಲಿ ‘ಬಿಜಿ ಅಜಯ್ ಕುಮಾರ್ ಜಿಂದಾಬಾದ್’ ಎಂದು ಹೇಳಿದ್ದಾರೆ. ಅಜಯ್ ಕುಮಾರ್ ಈ ಹಿಂದೆ ದಾವಣಗೆರೆ ದಕ್ಷಿಣದಲ್ಲಿ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ವಿರುದ್ಧ ಸೋಲು ಕಂಡಿದದರು.
ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದಲ್ಲಿ ನಡೆಯಿತು. ಮಾತು ಆರಂಭಿಸುವ ಮುನ್ನ ರಾಧಾ ಮೋಹನ್ ದಾಸ್ ಅಗರ್ವಾಲ್ ಬಿ.ವೈ.ವಿಜಯೇಂದ್ರ ಮತ್ತು ದಾವಣಗೆರೆ ದಕ್ಷಿಣದ ಟಿಕೆಟ್ ಆಕಾಂಕ್ಷಿಯಾಗಿರುವ ಬಿ.ಜಿ.ವಿಜಯ್ ಕುಮಾರ್ ಹೆಸರು ಮಾತ್ರ ಹೇಳಿದರು.
“ಅಜಯ್ ಕುಮಾರ್ ಹೆಸರು ಇಲ್ಲಿ ಹೇಳುವ ಅಗತ್ಯವಿತ್ತು” ಎಂದು ಹೇಳಿದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರೇ ಮುಂದಿನ ಉಪ ಚುನಾವಣೆ ಅಭ್ಯರ್ಥಿಯಾಗಬಹುದು ಎಂದು ಸೂಚನೆಯನ್ನು ನೀಡಿದರು.
ರಾಧಾ ಮೋಹನ್ ದಾಸ್ ಅಗರ್ವಾಲ್, “ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ. ಕಮಲದ ಚಿನ್ಹೆ ಯಾರ ಬಳಿ ಇರುತ್ತದೆಯೋ ಅಲ್ಲಿ ಕಾರ್ಯಕರ್ತರಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಸಹ ಆ ಅಭ್ಯರ್ಥಿ ನಿಮ್ಮ ಶತ್ರುವಾಗಿದ್ದರೂ ಸಹ ಅವರ ಪರವಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
2008 ರಿಂದ 2023ರ ತನಕ ನಾಲ್ಕು ಚುನಾವಣೆಗಳಲ್ಲಿಯೂ ಬಿಜೆಪಿ ದಾವಣಗೆರೆ ದಕ್ಷಿಣದಲ್ಲಿ ಗೆಲುವು ಸಾಧಿಸಿಲ್ಲ. ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಜಿ.ಅಜಯ್ ಕುಮಾರ್ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ವಿರುದ್ಧ ಚುನಾವಣೆಯಲ್ಲಿ ಸೋಲು ಕಂಡಿದ್ದರು.
- 2008ರಲ್ಲಿ ಶಾಮನೂರು ಶಿವಶಂಕರಪ್ಪ 41,675 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಯಶವಂತರಾವ್ ಜಾಧವ್ 35,317 ಮತಗಳನ್ನು ಪಡೆದು ಸೋಲು ಕಂಡಿದ್ದರು.
- 2013ರ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 66,320 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಬಿ.ಲೋಕೇಶ್ 21,282 ಮತಗಳನ್ನು ಪಡೆದು ಸೋಲು ಕಂಡಿದ್ದರು.
- 2018ರ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 71,369 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಯಶವಂತರಾವ್ ಜಾಧವ್ 55,485 ಮತಗಳನ್ನು ಪಡೆದು ಸೋಲು ಕಂಡಿದ್ದರು.
- 2023ರ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 84,298 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯ ಅಜಯ್ ಕುಮಾರ್ ಬಿ.ಜಿ. 56,410 ಮತಗಳನ್ನು ಪಡೆದು ಸೋಲು ಕಂಡಿದ್ದರು.

