ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆಯ ಸಂದರ್ಭದಲ್ಲಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ವಿವಿಧ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 56,432 ಹುದ್ದೆಗಳನ್ನು ಈ ವರ್ಷ ಭರ್ತಿ ಮಾಡಲಾಗುವುದು ಎಂದು ಘೋಷಿಸಲಾಗಿದೆ.ಸರ್ಕಾರಿ ಇಲಾಖೆಗಳಲ್ಲಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಆಡಳಿತ ಯಂತ್ರಕ್ಕೆ ವೇಗ ನೀಡಲು ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.
ಪ್ರಣಾಳಿಕೆ ಭರವಸೆ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಉದ್ಯೋಗ ಸೃಷ್ಟಿಗೆ ತಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ಬಜೆಟ್ ಅನುಮೋದನೆ: ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ಪಡೆಯಲಾಗಿದೆ.
ಇಂದು ಸಿದ್ದರಾಮಯ್ಯ 17ನೇ ದಾಖಲೆಯ ಬಜೆಟ್ ಮಂಡನೆ ಹಿನ್ನೆಲೆ, ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಇರಲಿದೆ. ರಾಜ್ಯದ ಆಯ್ದ 230 ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಮಾಡಲಾಗುತ್ತಿದೆ. ಬೆಂಗಳೂರಿನ 6 ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ವೀಕ್ಷಿಸಬಹುದು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಬಜೆಟ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

