ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) 2025ರ ವಿಮಾನ ನಿಲ್ದಾಣ ಸೇವಾ ಗುಣಮಟ್ಟದ (ASQ) ಶ್ರೇಯಾಂಕದಲ್ಲಿ ಜಾಗತಿಕವಾಗಿ ಸತತ ನಾಲ್ಕನೇ ಬಾರಿಗೆ ‘ಅತ್ಯುತ್ತಮ ಆಗಮನದ ವಿಮಾನ ನಿಲ್ದಾಣ’ (Best Airport at Arrivals) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಹೊಸ ದಾಖಲೆ ಬರೆದಿದೆ. ಪ್ರಯಾಣಿಕರ ಸುಗಮ ಅನುಭವ, ಅತ್ಯಾಧುನಿಕ ಸೌಲಭ್ಯಗಳು ಮತ್ತು ಗುಣಮಟ್ಟದ ಸೇವೆಗಾಗಿ ಈ ಮನ್ನಣೆ ಸಿಕ್ಕಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪರಿಷತ್ತು (ACI) ನೀಡುವ 2025ರ ವಿಮಾನ ನಿಲ್ದಾಣ ಸೇವಾ ಗುಣಮಟ್ಟದ ಪ್ರಶಸ್ತಿಗಳಲ್ಲಿ ಬೆಂಗಳೂರು ನಿಲ್ದಾಣಕ್ಕೆ ಈ ಗೌರವ ಲಭಿಸಿದೆ.2022ರಿಂದಲೂ ಬೆಂಗಳೂರು ವಿಮಾನ ನಿಲ್ದಾಣವು ಸತತವಾಗಿ ಈ ವಿಭಾಗದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುತ್ತಿದೆ.
ವಿಮಾನ ನಿಲ್ದಾಣದ ಸೇವೆಗಳು, ಸೌಲಭ್ಯಗಳು, ಅನುಕೂಲತೆ ಮತ್ತು ಸ್ವಚ್ಛತೆಯ ಬಗ್ಗೆ ಪ್ರಯಾಣಿಕರು ನೀಡುವ ಅಧಿಕೃತ ಪ್ರತಿಕ್ರಿಯೆ ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿಮಾನ ನಿಲ್ದಾಣದ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗಿರೀಶ್ ನಾಯರ್, “ಪ್ರತಿ ಪ್ರಯಾಣಿಕರ ಆಗಮನವು ನಮ್ಮ ಜವಾಬ್ದಾರಿ. ಅವರ ವೇಗ ಮತ್ತು ಸೌಕರ್ಯಕ್ಕೆ ಅನುಗುಣವಾಗಿ ನಾವು ನಮ್ಮ ಕಾರ್ಯಾಚರಣೆಯನ್ನು ರೂಪಿಸುತ್ತೇವೆ” ಎಂದು ತಿಳಿಸಿದ್ದಾರೆ.
ತಂಡದ ಶ್ರಮ: ಈ ಪ್ರಶಸ್ತಿಯು ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪಾಲುದಾರರ ಸಾಮೂಹಿಕ ಬದ್ಧತೆ ಹಾಗೂ ಸ್ಥಿರವಾದ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.ವಿಮಾನದಿಂದ ಇಳಿದ ಕ್ಷಣದಿಂದಲೇ ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುವ ಬೆಂಗಳೂರು ವಿಮಾನ ನಿಲ್ದಾಣದ ಪ್ರಯತ್ನಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.

