ಕೊಲಂಬೊ/ವಾಷಿಂಗ್ಟನ್ : ಅಮೆರಿಕ ಮತ್ತು ಇಸ್ರೇಲ್ ಸೈನ್ಯದ ವಿರುದ್ಧ ಇರಾನ್ ಸೇನೆಯು ಸಂಘರ್ಷ ನಡೆಸುತ್ತಿದೆ. ಯುದ್ಧ ಮುಂದುವರಿಯುತ್ತಿರುವ ಬೆನ್ನಲ್ಲೇ, ಶ್ರೀಲಂಕಾದ ದಕ್ಷಿಣ ಕರಾವಳಿಯ ಮೂಲಕ ಸಾಗುತ್ತಿದ್ದ ಇರಾನ್ನ ಯುದ್ಧನೌಕೆ (IRIS Dena) ಮೇಲೆ ಅಮೆರಿಕದ ಜಲಾಂತರ್ಗಾಮಿ (ಸಬ್ಮೆರಿನ್) ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ. ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದ ವಿಡಿಯೋವನ್ನು ಅಮೆರಿಕ ಸೇನೆ ಬಿಡುಗಡೆ ಮಾಡಿದೆ.
87 ಮೃತದೇಹಗಳು ಪತ್ತೆ
ವರದಿಗಳ ಪ್ರಕಾರ, ಇರಾನ್ನ ಈ ಯುದ್ಧನೌಕೆಯಲ್ಲಿ ಒಟ್ಟು 180 ಪ್ರಯಾಣಿಕರಿದ್ದರು. ನೌಕೆಯಿಂದ ಅಪಾಯದ ಸಂಕೇತ ದೊರೆತ ತಕ್ಷಣ ಶ್ರೀಲಂಕಾ ಸೇನೆಯು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಸಮುದ್ರದಲ್ಲಿ ಮುಳುಗಿದ ಇರಾನ್ ಯುದ್ಧನೌಕೆಯಿಂದ ಶ್ರೀಲಂಕಾ ನೌಕಾಪಡೆಯು ಇದುವರೆಗೆ 87 ಮೃತದೇಹಗಳನ್ನು ಹೊರತೆಗೆದಿದೆ.
ಶ್ರೀಲಂಕಾ ವಿದೇಶಾಂಗ ಸಚಿವರಿಂದ ಮಾಹಿತಿ
ಪಿಟಿಐ ಸುದ್ದಿಸಂಸ್ಥೆಯ ಪ್ರಕಾರ, ಬುಧವಾರ (ಮಾರ್ಚ್ 4) ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಮುಳುಗಿದ ಇರಾನ್ ನೌಕೆಯಿಂದ ಸುಮಾರು 32 ನಾಗರಿಕರನ್ನು ರಕ್ಷಿಸಲಾಗಿದೆ. ಲಂಕಾ ನೌಕಾಪಡೆಯು ಹೆಚ್ಚಿನ ಸಂಖ್ಯೆಯ ಮೃತದೇಹಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಪಾರ್ಲಿಮೆಂಟ್ನಲ್ಲಿ ಮಾತನಾಡಿದ ವಿದೇಶಾಂಗ ಸಚಿವ ವಿಜಿತ ಹೇರತ್, “ಬೆಳಿಗ್ಗೆ 5:08 ಕ್ಕೆ ಗಾಲೆ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ ‘ಐರಿಸ್ ಡೇನಾ’ ನೌಕೆ ಮುಳುಗುತ್ತಿರುವ ಮಾಹಿತಿ ಲಭ್ಯವಾಯಿತು. ತಕ್ಷಣವೇ ಶ್ರೀಲಂಕಾ ನೌಕಾಪಡೆ ಮತ್ತು ಸೇನೆ ರಕ್ಷಣಾ ಕಾರ್ಯಕ್ಕೆ ಮುಂದಾದವು,” ಎಂದು ತಿಳಿಸಿದ್ದಾರೆ.
ಭಾರತದ ನೌಕಾ ವ್ಯಾಯಾಮದಲ್ಲಿ ಭಾಗವಹಿಸಿತ್ತು
ಈ ಇರಾನ್ ನೌಕೆಯು ಇತ್ತೀಚೆಗೆ ಭಾರತ ಆಯೋಜಿಸಿದ್ದ ಅಂತರಾಷ್ಟ್ರೀಯ ನೌಕಾ ವ್ಯಾಯಾಮದಲ್ಲಿ ಪಾಲ್ಗೊಂಡಿತ್ತು. ಆದರೆ, ಈ ಘಟನೆಯ ಬಗ್ಗೆ ಭಾರತೀಯ ನೌಕಾಪಡೆಯು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶ್ರೀಲಂಕಾ ವಿದೇಶಾಂಗ ಸಚಿವರ ಪ್ರಕಾರ, ಅಪಘಾತದ ಸಮಯದಲ್ಲಿ ನೌಕೆಯಲ್ಲಿದ್ದ 180 ಜನರಲ್ಲಿ ಕೆಲವರು ಸಮುದ್ರದಲ್ಲಿ ಮುಳುಗುತ್ತಿದ್ದರೆ, ಇನ್ನು ಕೆಲವರು ಈಜಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಸೇನೆ ಸ್ಥಳಕ್ಕೆ ತಲುಪುವಷ್ಟರಲ್ಲಿ ಅಲ್ಲಿ ಯುದ್ಧನೌಕೆಯ ಗುರುತುಗಳಿರಲಿಲ್ಲ. ಏಕೆಂದರೆ ಅಮೆರಿಕದ ಸಬ್ಮೆರಿನ್ ಇರಾನ್ ನೌಕೆಯ ಮೇಲೆ ದಾಳಿ ಮಾಡಿದ್ದಲ್ಲದೆ, ಅದನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿದೆ ಎಂದು ಅಮೆರಿಕದ ಅಧಿಕಾರಿಗಳು ವಿಡಿಯೋ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.
ಅಮೆರಿಕ ರಕ್ಷಣಾ ಕಾರ್ಯದರ್ಶಿಯ ಹೇಳಿಕೆ
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಅಮೆರಿಕದ ಜಲಾಂತರ್ಗಾಮಿಯು ಇರಾನ್ ನೌಕೆಯ ಮೇಲೆ ದಾಳಿ ನಡೆಸಿ ಅದನ್ನು ಮುಳುಗಿಸಿದೆ ಎಂದು ಅವರು ಖಚಿತಪಡಿಸಿದ್ದಾರೆ. ಎರಡನೇ ಮಹಾಯುದ್ಧದ ನಂತರ ಶತ್ರು ನೌಕೆಯನ್ನು ಟಾರ್ಪಿಡೊ (Torpedo) ಮೂಲಕ ಮುಳುಗಿಸಿದ ಮೊದಲ ಘಟನೆ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

