ಬೆಂಗಳೂರು: ಗಂಗಾ ಕಲ್ಯಾಣ ಪೋರ್ಟಲ್ ನಲ್ಲಿ ವಿದ್ಯುತ್ ಮೂಲಸೌಕರ್ಯದ ಮಾಹಿತಿ ಪಡೆಯಬಹುದಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಪೋರ್ಟಲ್ ನ ಹೊಸ ಆಯ್ಕೆಯನ್ನು ಅನಾವರಣಗೊಳಿಸಿದ ಸಚಿವರು, ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತು ಅರ್ಜಿಯ ಸ್ಥಿತಿಗತಿಯನ್ನು ಆನ್ಲೈನ್ ನಲ್ಲಿ ಟ್ರ್ಯಾಕ್ ಮಾಡಲು ಬೆಸ್ಕಾಂ ವತಿಯಿಂದ ಗಂಗಾ ಕಲ್ಯಾಣ ಪೋರ್ಟಲ್ ನಲ್ಲಿ ಹೊಸ ಆಯ್ಕೆ ಕಲ್ಪಿಸಲಾಗಿದೆ. ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಒದಗಿಸಲು ಈ ಆಯ್ಕೆ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಸಣ್ಣ, ಅತಿ ಸಣ್ಣ ರೈತರ ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್ ಸೆಟ್ ಅಳವಡಿಸಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಕೊಳವೆಬಾವಿ ಕೊರೆದ ಬಳಿಕ ವಿದ್ಯುತ್ ಮೂಲ ಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಪೋರ್ಟಲ್ ನಲ್ಲಿಯೇ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರೈತರು ಈ ಸೇವೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯ ಪೋರ್ಟಲ್ ನಲ್ಲಿ ಟ್ರ್ಯಾಕ್ ಅಪ್ಲಿಕೇಶನ್ ಕ್ಲಿಕ್ ಮಾಡಿ ಪೂರಕ ವಿವರ ದಾಖಲಿಸಿದಲ್ಲಿ ಫಲಾನುಭವಿಗಳು ತಮ್ಮ ಅರ್ಜಿಯ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

