ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಕಾರಣ ಭಾರತ ಮತ್ತು ವಿದೇಶದ ಅನೇಕ ವಿಮಾನಗಳ ಹಾರಾಟ ರದ್ದಾಗಿದೆ. ವಿವಿಧ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿದ್ದು, ಯಾವಾಗ ವಿಮಾನ ಯಾವಾಗ ಸಹಜ ಸ್ಥಿತಿಗೆ ಬರಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಪಶ್ಚಿಮ ಏಷ್ಯಾದ ವಾಯು ಪ್ರದೇಶದ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಸಚಿವಾಲಯ ಪಶ್ಚಿಮ ಏಷ್ಯಾದ ಭಾಗಗಳಲ್ಲಿನ ವಾಯುಪ್ರದೇಶದ ಪರಿಸ್ಥಿತಿಯನ್ನು ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಯ ಮೇಲೆ ಅದರ ಪರಿಣಾಮವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.
ಪ್ರಸ್ತುತ ಪರಿಸ್ಥಿತಿಯಿಂದಾಗಿ ಇಲ್ಲಿಯವರೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 388 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ವೇಳಾಪಟ್ಟಿಯಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದು, ನಿರ್ಬಂಧಿತ ವಾಯುಪ್ರದೇಶವನ್ನು ತಪ್ಪಿಸುವ ಪರ್ಯಾಯ ಮಾರ್ಗಗಳ ಮೂಲಕ ದೀರ್ಘ ಮತ್ತು ಅತಿ ದೀರ್ಘ ಪ್ರಯಾಣದ ವಿಮಾನಗಳನ್ನು ಹಂತಹಂತವಾಗಿ ಪುನರಾರಂಭಿಸುತ್ತಿವೆ ಎಂದು ತಿಳಿಸಿದೆ.
ಸಿಲುಕಿರುವ ಪ್ರಯಾಣಿಕರ ಪ್ರಯಾಣಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ವಿಮಾನಗಳನ್ನು ನಿಯೋಜಿಸುತ್ತಿವೆ. ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ವಿದೇಶಿ ವಿಮಾನಯಾನ ಪ್ರಾಧಿಕಾರಗಳು ಮತ್ತು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ.
ಇಂದು ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ಒಟ್ಟು 24 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಎಮಿರೇಟ್ಸ್ ಮತ್ತು ಇತಿಹಾದ್ ಸಂಸ್ಥೆಗಳು ಗಲ್ಫ್ ಪ್ರದೇಶದಿಂದ 9 ವಿಮಾನಗಳ ಕಾರ್ಯಾಚರಣೆಯನ್ನು ನಿರ್ವಹಿಸಿವೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ಮಾರ್ಚ್ 4 ರಂದು 58 ವಿಮಾನಗಳ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿವೆ. ಇದರಲ್ಲಿ ಇಂಡಿಗೋ ಸಂಸ್ಥೆಯ 30 ವಿಮಾನಗಳು ಹಾಗೂ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 23 ವಿಮಾನಗಳು ಸೇರಿವೆ.
ಭಾರತ ಮತ್ತು ಗಲ್ಫ್ ಪ್ರದೇಶದ ನಡುವೆ ಕಾರ್ಯನಿರ್ವಹಿಸುತ್ತಿರುವ ವಿದೇಶಿ ವಿಮಾನಯಾನ ಸಂಸ್ಥೆಗಳು ಕೂಡ ಕಾರ್ಯಾಚರಣೆ ಮತ್ತು ವಾಯುಪ್ರದೇಶದ ಪರಿಸ್ಥಿತಿಗೆ ಅನುಗುಣವಾಗಿ ಸೀಮಿತ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಟಿಕೆಟ್ ಮರುಪಾವತಿ, ಮರುಹೊಂದಾಣಿಕೆ ಹಾಗೂ ಪ್ರಯಾಣಿಕರ ಸಹಾಯಕ್ಕೆ ಸಂಬಂಧಿಸಿದ ಇತರ ನಿಯಮ ಪಾಲಿಸಲು ಸೂಚಿಸಲಾಗಿದೆ.
ವಿಮಾನಯಾನ ಸಂಸ್ಥೆಗಳೊಂದಿಗೆ ಸಚಿವಾಲಯವು ನಿರಂತರ ಸಂಪರ್ಕದಲ್ಲಿದೆ. ಈ ಅವಧಿಯಲ್ಲಿ ಟಿಕೆಟ್ ದರಗಳಲ್ಲಿ ಯಾವುದೇ ಅತಿಯಾದ ಏರಿಕೆಯಾಗದಂತೆ ತಡೆಯಲು ಬೆಲೆಗಳ ಮೇಲೆ ಹತ್ತಿರದ ನಿಗಾ ಇರಿಸಲಾಗಿದೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಮೂಲಕ ವಿಮಾನದ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಅಪ್‌ಡೇಟ್‌ಗಳಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ನಂಬಬೇಕು ಎಂದು ಮನವಿ ಮಾಡಲಾಗಿದೆ.

