ಬೆಂಗಳೂರು : ಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಕೌಶಲ್ಯ ರೂಪಿಸಿಕೊಳ್ಳಲು ಪತ್ರಿಕೋದ್ಯಮ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎರಡು ದಿನಗಳ (ಮಾರ್ಚ್ 4 ಮತ್ತು 5 ರಂದು) ವಿಶೇಷ ಕಾರ್ಯಗಾರ ” *ಮಾಧ್ಯಮ ಹಬ್ಬ- 2026″* ನ್ನು ಹಮ್ಮಿಕೊಂಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ನಗರ ಜಿಲ್ಲೆ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ , ಜ್ಞಾನಭಾರತಿ, ಸಹಭಾಗಿತ್ವದಲ್ಲಿ ಇಂದು ಮಾರ್ಚ್ 04, 2026 ರಂದು ಬೆಳಿಗ್ಗೆ 10:00 ಗಂಟೆಗೆ ನಗರದ ಅರಮನೆ ರಸ್ತೆಯಲ್ಲಿರುವ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ, ಅಕಾಡೆಮಿಕ್ ಬ್ಲಾಕ್ ಡಬ್ಲ್ಯೂ.ಬಿ.ಸಿ ಸಭಾಂಗಣದಲ್ಲಿ ಕಾರ್ಯಗಾರಕ್ಕೆ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಿ ಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನೇಶ್ ಆರ್. ಗುಂಡೂರಾವ್ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಹಿರಿಯ ಪತ್ರಕರ್ತರು ಹಾಗೂ ಚಿಂತಕರಾದ ದಿನೇಶ್ ಅಮೀನ್ ಮಟ್ಟು, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ರಮೇಶ್.ಬಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ.ಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಮ್ ನಿಂಬಾಳ್ಕರ್ ರವರು ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಅಯೇಷಾ ಖಾನಂ ಹಾಗೂ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ನವೀನ್ ಜೋಸೆಫ್ ಭಾಗವಹಿಸುವರು.
ಸುಮಾರು 100 ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವ ಈ ಕಾರ್ಯಗಾರದಲ್ಲಿ ಸಾಮಾಜಿಕ ವಿಷಯಗಳ ಕುರಿತು ಪತ್ರಿಕಾಗೋಷ್ಠಿ ವರದಿಗಾರಿಕೆ, ಸಂಪಾದಕೀಯ ಬರವಣಿಗೆ, ಮೊಬೈಲ್ ಜರ್ನಲಿಸಂ ಮತ್ತು ರೇಡಿಯೋ/ಪಾಡಕಾಸ್ಟ್ ಸಂದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಮಾಧ್ಯಮಗಳಲ್ಲಿ ನೈತಿಕತೆ, ಪತ್ರಿಕೋದ್ಯಮದಲ್ಲಿ ಮಹಿಳೆಯರು-ಸವಾಲುಗಳು ಮತ್ತು ಪರಿಹಾರ, OTT-ಆರಂಭ ಮತ್ತು ಭವಿಷ್ಯ, ಅಭಿವ್ಯಕ್ತಿ ಮಾಧ್ಯಮವಾಗಿ ಚಲನಚಿತ್ರಗಳು ಹಾಗೂ ಮಾಧ್ಯಮಗಳ ಸಮಾಜಿಕ ಹೊಣೆಗಾರಿಕೆ ಕುರಿತು ಸಂವಾದ ಹಾಗೂ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತರು, ಚಿಂತಕರು ಮತ್ತು ಕ್ಷೇತ್ರ ತಜ್ಞರು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಾಗೂ ಪರಿಣಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

