ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರವು ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ ಪ್ರಕಾರ, ಇಂಡಿಗೋ (IndiGo) ಸಂಸ್ಥೆಯು ಮಾರ್ಚ್ 3ರಂದು (ಇಂದು) ಸೌದಿ ಅರೇಬಿಯಾದ ಜೆಡ್ಡಾದಿಂದ ಭಾರತದ ವಿವಿಧ ನಗರಗಳಿಗೆ 10 ವಿಶೇಷ ಪರಿಹಾರ ವಿಮಾನಗಳನ್ನು ಓಡಿಸಲು ಯೋಜಿಸಿದೆ.
ಈ ವಿಮಾನಗಳು ಹೈದರಾಬಾದ್, ಮುಂಬೈ, ದೆಹಲಿ ಮತ್ತು ಅಹಮದಾಬಾದ್ಗೆ ಸಂಚರಿಸಲಿವೆ. ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಪ್ರಹ್ಲಾದ್ ಜೋಶಿ ಅವರ ಭರವಸೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಮಾತನಾಡಿ, “ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಕನ್ನಡಿಗರು ಸೇರಿದಂತೆ ಯಾವುದೇ ಭಾರತೀಯರು ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಅವರನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆ. ಈ ಹಿಂದೆ ಉಕ್ರೇನ್ ಬಿಕ್ಕಟ್ಟಿನ ಸಮಯದಲ್ಲೂ ನಾವು ಸುರಕ್ಷಿತವಾಗಿ ನಮ್ಮವರನ್ನು ಕರೆತಂದಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುರಕ್ಷತೆಗಾಗಿ ಉನ್ನತ ಮಟ್ಟದ ಸಭೆ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ರಾತ್ರಿ ನಡೆದ ಭದ್ರತಾ ಸಂಪುಟ ಸಮಿತಿ (CCS) ಸಭೆಯಲ್ಲಿ, ಗಲ್ಫ್ ರಾಷ್ಟ್ರಗಳಲ್ಲಿರುವ ಬೃಹತ್ ಸಂಖ್ಯೆಯ ಭಾರತೀಯ ವಲಸಿಗರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಸಂತ್ರಸ್ತ ಭಾರತೀಯರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ದೇಶಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ
ಇಸ್ರೇಲ್ ಮತ್ತು ಅಮೆರಿಕವು ಇರಾನ್ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ, ದೇಶೀಯವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ:
• ಪ್ರಚೋದನಾಕಾರಿ ಹೇಳಿಕೆಗಳ ಮೇಲೆ ನಿಗಾ: ಇರಾನ್ ಪರವಾಗಿ ಪ್ರಚೋದನಾಕಾರಿ ಭಾಷಣ ಮಾಡುವವರ ಬಗ್ಗೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ಬಗ್ಗೆ ತೀವ್ರ ನಿಗಾ ಇಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
• ಸೋಷಿಯಲ್ ಮೀಡಿಯಾ ವಾಚ್: ಜಾಗತಿಕ ಭಯೋತ್ಪಾದಕ ಗುಂಪುಗಳ ಹ್ಯಾಂಡಲ್ಗಳು ಮತ್ತು ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲೆ ಕಣ್ಣಿಡಲು ಸೂಚಿಸಲಾಗಿದೆ.
• ರಾಯಭಾರ ಕಚೇರಿಗಳಿಗೆ ಭದ್ರತೆ: ಭಾರತದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ನ ರಾಯಭಾರ ಕಚೇರಿಗಳು, ಕಾನ್ಸುಲೇಟ್ಗಳು ಮತ್ತು ಅವರ ಇತರ ಸಂಸ್ಥೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮತ್ತು ಶಾಂತಿ ಕಾಪಾಡುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ.
ರಂಜಾನ್ ಆರಂಭ, ಉಮ್ರಾ ಯಾತ್ರೆ ಮತ್ತು ಹೋಳಿ ಹಬ್ಬದ ಪ್ರಯಾಣದ ಕಾರಣ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿದ್ದಾರೆ. ಹೀಗಾಗಿ ಸರ್ಕಾರವು ಅವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

