ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಮಹಾಯುದ್ಧದ ರೂಪ ಪಡೆದುಕೊಂಡಿದ್ದು, ಕಳೆದ ಕೇವಲ ಮೂರು ದಿನಗಳಲ್ಲಿ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಗೆ ಇರಾನ್ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ. ಇಸ್ರೇಲ್ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಆರ್ಭಟಕ್ಕೆ ಇರಾನ್ನಲ್ಲಿ ಈವರೆಗೆ 550ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇರಾನ್ನ ಪ್ರಮುಖ ಸೇನಾ ನೆಲೆಗಳು ಮತ್ತು ತೈಲ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಯಿಂದಾಗಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳು ಬೆಂಕಿಯ ಕೆನ್ನಾಲಗೆಯಲ್ಲಿ ಸಿಲುಕಿವೆ. ಈ ರಕ್ತಪಾತಕ್ಕೆ ಪ್ರತೀಕಾರವಾಗಿ ಇರಾನ್ ಸಹ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಆರಂಭಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.
ಫೆಬ್ರವರಿ 28 ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ಕ್ಷಿಪಣಿ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಇದಕ್ಕೆ ಪ್ರತೀಕಾರವಾಗಿ ಟೆಹ್ರಾನ್ (ಇರಾನ್), ಈ ಪ್ರಾಂತ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಅವರೊಂದಿಗೆ ಅವರ ಪುತ್ರಿ, ಮೊಮ್ಮಗು, ಸೊಸೆ ಮತ್ತು ಅಳಿಯ ಕೂಡ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಯುದ್ಧದ ವಿಸ್ತರಣೆ: ಈ ಘಟನೆಯ ನಂತರ ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ದುಬೈ, ಬೈರೂತ್ ಮತ್ತು ಒಮಾನ್ ಮೇಲೆ ದಾಳಿ ನಡೆಸಿದ್ದು, ಸಂಘರ್ಷ ಮತ್ತಷ್ಟು ವ್ಯಾಪಿಸಿದೆ.
ಯುಎಇ ಆಕ್ರೋಶ: ತನ್ನ ದೇಶ ಮತ್ತು ನೆರೆಯ ಒಮಾನ್ ಸುಲ್ತಾನೇಟ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಯುಎಇ ತೀವ್ರವಾಗಿ ಖಂಡಿಸಿದೆ. ಇದನ್ನು “ಅಪಾಯಕಾರಿ ಉಲ್ಬಣ” ಎಂದು ಕರೆದಿರುವ ಯುಎಇ, ತಕ್ಷಣವೇ ಇರಾನ್ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಮತ್ತು ತನ್ನ ರಾಯಭಾರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿದೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ:
ಭಾನುವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಲ್ಫ್ ರಾಷ್ಟ್ರದ ಮೇಲೆ ಇರಾನ್ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮತ್ತು ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು.
“ನನ್ನ ಸಹೋದರ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತನಾಡಿದೆ. ಯುಎಇ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದೇನೆ ಮತ್ತು ಈ ದಾಳಿಯಲ್ಲಿನ ಜೀವಹಾನಿಗೆ ಸಂತಾಪ ಸೂಚಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತವು ಯುಎಇ ಜೊತೆಗೆ ದೃಢವಾಗಿ ನಿಲ್ಲುತ್ತದೆ,” ಎಂದು ಪ್ರಧಾನಿ ಮೋದಿ ‘X’ ನಲ್ಲಿ ತಿಳಿಸಿದ್ದಾರೆ.

