ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆ ಸಿಗುವುದು ಎಷ್ಟು ಕಷ್ಟವೋ, ಮನೆ ಖಾಲಿ ಮಾಡುವಾಗ ಕೊಟ್ಟ ಮುಂಗಡ ಹಣವನ್ನು (Security Deposit) ವಾಪಸ್ ಪಡೆಯುವುದು ಅಷ್ಟೇ ಹರಸಾಹಸ ಎಂಬಂತಾಗಿದೆ. ಇತ್ತೀಚೆಗೆ ಬೆಂಗಳೂರಿನ ಬಾಡಿಗೆದಾರನೊಬ್ಬ ಹಂಚಿಕೊಂಡಿರುವ ನೋವಿನ ಕಥೆ ಈಗ ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಘಟನೆಯ ಹಿನ್ನೆಲೆ: ಪೇಂಟಿಂಗ್ ಹೆಸರಲ್ಲಿ ನಡೆದಿದ್ದೇನು?
ಬೆಂಗಳೂರಿನಲ್ಲಿ 3BHK ಫ್ಲ್ಯಾಟ್ನಲ್ಲಿದ್ದ ಬಾಡಿಗೆದಾರ ಮನೆ ಖಾಲಿ ಮಾಡುವಾಗ ಮಾಲೀಕರು ಬರೋಬ್ಬರಿ ₹51,000 ಕಡಿತಗೊಳಿಸಿದ್ದಾರೆ. ಆರಂಭದಲ್ಲಿ ಪೇಂಟರ್ ಒಬ್ಬರು ಬಂದು ಕೇವಲ ₹20,000 ಖರ್ಚಾಗಬಹುದು ಎಂದು ಅಂದಾಜಿಸಿದ್ದರು. ಆದರೆ, ಬಾಡಿಗೆದಾರ ಮನೆ ಖಾಲಿ ಮಾಡಿದ ಬೆನ್ನಲ್ಲೇ ಮಾಲೀಕರು ಮತ್ತು ಪೇಂಟರ್ ಸೇರಿಕೊಂಡು ಬಿಲ್ ಮೊತ್ತವನ್ನು ಇದ್ದಕಿದ್ದಂಗೆ ₹36,000 ಕ್ಕೆ ಏರಿಸಿದ್ದಾರೆ ಈ ಬಗ್ಗೆ ಬಾಡಿಗೆದಾರನಿಗೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಕೇವಲ ಪೇಂಟಿಂಗ್ ಮಾತ್ರವಲ್ಲ, ಮನೆಯ ಡೀಪ್ ಕ್ಲೀನಿಂಗ್ ಹೆಸರಲ್ಲಿ ₹10,000 ಕಡಿತಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿ ಇಂತಹ ಸೇವೆಗೆ ಗರಿಷ್ಠ ₹5,000 ದರವಿದ್ದರೂ, ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡಿರುವುದು ಬಾಡಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
ವಿದೇಶದಲ್ಲಿದ್ದುಕೊಂಡು ಮಾಲೀಕನ ದಬ್ಬಾಳಿಕೆ
ಮನೆಯ ಮಾಲೀಕರು ಪ್ರಸ್ತುತ ಉತ್ತರ ಅಮೆರಿಕಾದಲ್ಲಿ ವಾಸವಿದ್ದಾರೆ. ಇಷ್ಟೆಲ್ಲಾ ಹಣ ಕಡಿತಗೊಳಿಸಿದ ಮೇಲೂ ಹೆಚ್ಚುವರಿಯಾಗಿ ₹5,000 ತಡೆಹಿಡಿದಿದ್ದಾರೆ. “ಹೊಸ ಬಾಡಿಗೆದಾರರು ಬಂದು ಎರಡು ವಾರ ಕಳೆದ ಮೇಲೆ, ಮನೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೆ ಮಾತ್ರ ಈ ಹಣ ಕೊಡುತ್ತೇನೆ ಎಂಬ ಅಸಂಬದ್ಧ ಷರತ್ತನ್ನು ಮಾಲೀಕರು ವಿಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ:
ಬೆಂಗಳೂರಿನಲ್ಲಿ ಒಂದು ತಿಂಗಳ ಬಾಡಿಗೆ ಮತ್ತು ಹಾನಿಯ ವೆಚ್ಚವನ್ನು ಕಡಿತಗೊಳಿಸುವುದು ಹಳೆಯ ಸಂಪ್ರದಾಯ ಎಂದು ಕೆಲವರು ಮಾಲೀಕರ ಪರ ನಿಂತಿದ್ದಾರೆ.
ಆದರೆ ಬಹುತೇಕರು, “ಇದೇ ಕಾರಣಕ್ಕೆ ಜನರು ಬಾಡಿಗೆ ಮನೆ ಸಹವಾಸ ಸಾಕು ಎಂದು ಸ್ವಂತ ಮನೆ ಖರೀದಿಸಲು ಬಯಸುತ್ತಾರೆ. ಮಾಲೀಕರು ಬಾಡಿಗೆದಾರರನ್ನು ಎಟಿಎಂ ಮಿಷನ್ ಅಂದುಕೊಂಡಿದ್ದಾರೆ” ಎಂದು ಕಿಡಿಕಾರಿದ್ದಾರೆ.

