ಸೊರಬ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ರಾಜಕೀಯದಿಂದ ಬಿಡುವು ಪಡೆದು ಸಿನಿಮಾ ನಿರ್ಮಾಣ ಮಾಡಿ, ನಾಯಕ ನಟರಾಗಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ವಿಜಯನಗರದ ನಿವಾಸದಲ್ಲಿ ಸೋಮವಾರ ಸಚಿವ ವಿ.ಸೋಮಣ್ಣ ʼಸರ್ಕಾರಿ ನ್ಯಾಯಬೆಲೆ ಅಂಗಡಿ ಸೋಮನಹಳ್ಳಿʼ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ ಹರೀಶ್, ವಿಶ್ವನಾಥ್ ಗೌಡರವರು ಹಾಗೂ ಚಲನಚಿತ್ರದ ನಿರ್ಮಾಪಕ ತೇಜು ಮೂರ್ತಿ, ಎಸ್. ಪದ್ಮಾವತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಈ ಕುರಿತು ಕುಮಾರ್ ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ನಾನು ನಾಯಕ ನಟನಾಗಿ ನಿರ್ಮಿಸಿರುವ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಸಿನಿಮಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಲಾಯಿತು’ ಎಂದು ಹೇಳಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೊರಬ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕುಮಾರ್ ಬಂಗಾರಪ್ಪ ಗೆಲುವು ಸಾಧಿಸಿದ್ದರು. 2023ರ ಚುನಾವಣೆಯಲ್ಲಿಯೂ ಅವರು ಟಿಕೆಟ್ ಪಡೆದಿದ್ದರು.
ಆದರೆ ಚುನಾವಣೆಯಲ್ಲಿ 54,650 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಮಧು ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದಾರೆ. ಈಗ ರಾಜಕೀಯದಿಂದ ಬ್ರೇಕ್ ಪಡೆದು, ಸಿನಿಮಾ ನಿರ್ಮಾಣ ಮಾಡಿ ನಟಿಸಿದ್ದಾರೆ.

