ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ 5 ರನ್ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿ ಶ್ರೀಲಂಕಾಗೆ 213 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಅಂತಿಮ ಹಂತದಲ್ಲಿ ಎಡವಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ದಾಖಲಿಸಿತು.
ಪಾಕಿಸ್ತಾನ ಇನ್ನಿಂಗ್ಸ್: ಪಾಕಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದ ಸಹಿಬ್ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ 15.5 ಓವರ್ಗಳಲ್ಲಿ ಬರೋಬ್ಬರಿ 176 ರನ್ಗಳ ಜತೆಯಾಟವನ್ನಾಡಿದರು. ಇದು ಟಿ ಟ್ವೆಂಟಿ ವಿಶ್ವಕಪ್ನಲ್ಲೇ ದಾಖಲಾದ ಅತಿದೊಡ್ಡ ಜತೆಯಾಟ ಎಂಬ ದಾಖಲೆ ಇದು. ಫರ್ಹಾನ್ 60 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್ ಬಾರಿಸಿದರೆ, ಫಖರ್ ಜಮಾನ್ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಇವರ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಎಲ್ಲ ಆಟಗಾರರು ಸಹ ಒಂದಂಕಿಗೆ ವಿಕೆಟ್ ಒಪ್ಪಿಸಿ ಕಟ್ಟಿದ್ದ ಬೃಹತ್ ಇನ್ನಿಂಗ್ಸ್ ಮುಂದುವರಿಸುವಲ್ಲಿ ವಿಫಲರಾದರು. ಖವಾಜಾ ನಫೆ 2, ಶದಬ್ ಖಾನ್ 7, ಮೊಹಮ್ಮದ್ ನವಾಜ್ ಡಕ್ಔಟ್, ಸಲ್ಮಾನ್ ಅಲಿ ಆಘಾ ಡಕ್ಔಟ್, ಶಾಹೀನ್ ಅಫ್ರಿದಿ 4, ನಸೀಮ್ ಶಾ 1, ಉಸ್ಮಾನ್ ಖಾನ್ ಅಜೇಯ 8 ಹಾಗೂ ಅಬ್ರಾರ್ ಅಹ್ಮದ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಶ್ರೀಲಂಕಾ ಪರ ದಿಲ್ಶನ್ ಮಧುಶಂಕ ಮೂರು ವಿಕೆಟ್, ದಸುನ್ ಶನಕ ಎರಡು ವಿಕೆಟ್ ಹಾಗೂ ದುಷ್ಮಂತ ಚಮೀರ ಒಂದು ವಿಕೆಟ್ ಪಡೆದರು.
ಶ್ರೀಲಂಕಾ ಇನ್ನಿಂಗ್ಸ್: ಪಾಕ್ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 33 ರನ್ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಪತುಮ್ ನಿಸ್ಸಂಕ 3 ರನ್ ಗಳಿಸಿದರೆ, ಕಮಿಲ್ ಮಿಶಾರಾ 26 ರನ್ ಗಳಿಸಿದರು. ಇನ್ನುಳಿದಂತೆ ಚರಿತ್ ಅಸಲಂಕ 25 ರನ್, ಕಮಿಂದು ಮೆಂಡಿಸ್ 3, ಜನಿತ್ ಲಿಯನಾಗೆ 5 ರನ್ ಕಲೆಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಪವನ್ ರತ್ನಾಯಕೆ 58 ರನ್ ಗಳಿಸಿ ದಸುನ್ ಶನಕ ಜತೆ 61 ರನ್ಗಳ ಜತೆಯಾಟವನ್ನಾಡಿದರು. ನಾಯಕ ದಸುನ್ ಶನಕ ಅಂತಿಮ ಹಂತದಲ್ಲಿ ಅಬ್ಬರಿಸಿದರು. ಕೊನೆಯ ಓವರ್ನಲ್ಲಿ ಗೆಲ್ಲಲು 28 ರನ್ ಬೇಕಿದ್ದಾಗ ಒಂದು ಫೋರ್ ಹಾಗೂ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿ ತಂಡವನ್ನು ಗೆಲ್ಲಿಸುವತ್ತ ದಾಪುಗಾಲಿಟ್ಟಿದ್ದರು. ಆದರೆ ಕೊನೆಯ ಎರಡು ಎಸೆತಗಳನ್ನು ಶಾಹಿನ್ ಶಾ ಅಫ್ರಿದಿ ಡಾಟ್ ಬಾಲ್ ಹಾಕಿದ ಕಾರಣ ಪಾಕ್ ಗೆಲುವು ಕಂಡಿತು. ದಸುನ್ ಶನಕ 31 ಎಸೆತಗಳಲ್ಲಿ 2 ಫೋರ್ ಹಾಗೂ 8 ಸಿಕ್ಸರ್ ಸಹಿತ ಅಜೇಯ 76 ರನ್ ಬಾರಿಸಿದರು. ದುನಿತ್ ವೆಲ್ಲಲಗೆ ಅಜೇಯ 2 ರನ್ ಗಳಿಸಿದರು.
ಇನ್ನು ಪಾಕಿಸ್ತಾನ ಇಷ್ಟು ಬೃಹತ್ ಮೊತ್ತ ಕಲೆಹಾಕಿದರೂ ಶ್ರೀಲಂಕಾವನ್ನು 147 ರನ್ಗೆ ಅಥವಾ ಅದಕ್ಕಿಂತ ಕಡಿಮೆ ರನ್ಗೆ ಕಟ್ಟಿಹಾಕಿದರೆ ಮಾತ್ರ ನ್ಯೂಜಿಲೆಂಡ್ಗಿಂತ ಹೆಚ್ಚಿನ ನೆಟ್ ರನ್ರೇಟ್ ಪಡೆದು ಸೆಮಿಫೈನಲ್ ಪ್ರವೇಶಿಸಬಹುದಾದ ಅವಕಾಶವಿತ್ತು. ಆದರೆ ಶ್ರೀಲಂಕಾ 15.5 ಓವರ್ಗಳಲ್ಲಿ 148 ರನ್ ಮುಟ್ಟಿತು. ಪಾಕ್ ಸೆಮಿಫೈನಲ್ ತಲುಪಲು ಇದ್ದ ಕೊನೆಯ ಅವಕಾಶವನ್ನು ಕೈಚೆಲ್ಲಿತು. ಈ ಮೂಲಕ ಪಾಕಿಸ್ತಾನ ಟೂರ್ನಿಯಿಂದ ಎಲಿಮಿನೇಟ್ ಆಯಿತು. ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.
ಇನ್ನು ಪಾಕಿಸ್ತಾನ ಇಷ್ಟು ಬೃಹತ್ ಮೊತ್ತ ಕಲೆಹಾಕಿದರೂ ಶ್ರೀಲಂಕಾವನ್ನು 147 ರನ್ಗೆ ಅಥವಾ ಅದಕ್ಕಿಂತ ಕಡಿಮೆ ರನ್ಗೆ ಕಟ್ಟಿಹಾಕಿದರೆ ಮಾತ್ರ ನ್ಯೂಜಿಲೆಂಡ್ಗಿಂತ ಹೆಚ್ಚಿನ ನೆಟ್ ರನ್ರೇಟ್ ಪಡೆದು ಸೆಮಿಫೈನಲ್ ಪ್ರವೇಶಿಸಬಹುದಾದ ಅವಕಾಶವಿತ್ತು. ಆದರೆ ಶ್ರೀಲಂಕಾ 15.5 ಓವರ್ಗಳಲ್ಲಿ 148 ರನ್ ಮುಟ್ಟಿತು. ಪಾಕ್ ಸೆಮಿಫೈನಲ್ ತಲುಪಲು ಇದ್ದ ಕೊನೆಯ ಅವಕಾಶವನ್ನು ಕೈಚೆಲ್ಲಿತು. ಈ ಮೂಲಕ ಪಾಕಿಸ್ತಾನ ಟೂರ್ನಿಯಿಂದ ಎಲಿಮಿನೇಟ್ ಆಯಿತು. ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ.

