ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8ರಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಪಾಕಿಸ್ತಾನ ಆರಂಭಿಕರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 213 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿದೆ.
ಪಾಕಿಸ್ತಾನದ ಸೆಮಿಫೈನಲ್ ಪ್ರವೇಶವನ್ನು ನಿರ್ಧರಿಸುವ ಈ ಪಂದ್ಯದಲ್ಲಿ ಪಾಕಿಸ್ತಾನ ಬೃಹತ್ ಅಂತರದ ಗೆಲುವು ಸಾಧಿಸಲೇಬೇಕಿದ್ದು, ಆ ಸಲುವಾಗಿ ಪಾಕಿಸ್ತಾನದ ಆರಂಭಿಕ ಆಟಗಾರರಾದ ಸಹಿಬ್ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ 15.5 ಓವರ್‌ಗಳಲ್ಲಿ ಬರೋಬ್ಬರಿ 176 ರನ್‌ಗಳ ಜತೆಯಾಟವನ್ನಾಡಿ ಅಬ್ಬರಿಸಿದರು. ಇದು ಟಿ ಟ್ವೆಂಟಿ ವಿಶ್ವಕಪ್‌ನಲ್ಲೇ ದಾಖಲಾದ ಅತಿದೊಡ್ಡ ಜತೆಯಾಟ ಎಂಬ ದಾಖಲೆ ಇದು. ಫರ್ಹಾನ್ 60 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 100 ರನ್ ಬಾರಿಸಿದರೆ, ಫಖರ್ ಜಮಾನ್ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು.
ಫರ್ಹಾನ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಬಾರಿಸಿದ ಎರಡನೇ ಶತಕ ಇದಾಗಿದ್ದು, ಈ ಮೂಲಕ ಫರ್ಹಾನ್ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಬೃಹತ್ ದಾಖಲೆಯನ್ನು ಮುರಿದುಹಾಕಿದ್ದಾರೆ. ಹೌದು, 2013-14ರಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 319 ರನ್ ಬಾರಿಸಿದ್ದರು. ಈ ದಾಖಲೆಯನ್ನು ಇಲ್ಲಿಯವರೆಗೆ ಯಾರೂ ಸಹ ಮುರಿಯಲು ಆಗಿರಲಿಲ್ಲ. ಆದರೆ ಫರ್ಹಾನ್ ಈ ಪಂದ್ಯದ ಮೂಲಕ 383 ರನ್ ಬಾರಿಸಿ ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಅಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಕೊಹ್ಲಿ 6 ಇನ್ನಿಂಗ್ಸ್‌ನಲ್ಲಿ 319 ರನ್ ಬಾರಿಸಿದರೆ, ಫರ್ಹಾನ್ 7 ಇನ್ನಿಂಗ್ಸ್‌ನಲ್ಲಿ 383 ರನ್ ಬಾರಿಸಿದ್ದಾರೆ.

