ಬೆಳಗಾವಿ-ಮುಂಬೈ ನಡುವೆ ಸಂಚಾರ ನಡೆಸುವ ಜನರಿಗೆ ಸ್ಟಾರ್ ಏರ್ ಸಿಹಿಸುದ್ದಿ ನೀಡಿದೆ. ಬೆಳಗಾವಿ-ಮುಂಬೈ ನಡುವಿನ ವಿಮಾನ ಸೇವೆಯನ್ನು ಮಾರ್ಚ್ 29ರಿಂದ ಪುನಃ ಆರಂಭಿಸಲಾಗುತ್ತದೆ.
ಈ ಕುರಿತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ‘ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ಈ ಮುಂಚಿತವಾಗಿ ರದ್ದುಗೊಳಿಸಿದ ಬೆಳಗಾವಿ-ಮುಂಬೈ ನಡುವಿನ ವಿಮಾನಯಾನ ಸೇವೆಯನ್ನು ಪುನಃ ಪ್ರಾರಂಭ ಮಾಡಲಿದೆ’ ಎಂದು ಹೇಳಿದ್ದಾರೆ.
‘ಕೆಲವು ತಿಂಗಳ ಹಿಂದೆಯಷ್ಟೆ ಸ್ಟಾರ್ ಸಂಸ್ಥೆಯು ಬೆಳಗಾವಿ-ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು, ಇದನ್ನು ರದ್ದುಗೊಳಿಸದೆ ಇರುವ ಬಗ್ಗೆ ಕೋರಿ ಸ್ಟಾರ್ ಎರ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಘೋಡಾವತ್ ಇವರಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಹಾಗೂ ಪತ್ರವನ್ನು ಸಹ ಬರೆಯಲಾಗಿತ್ತು’ ಎಂದು ತಿಳಿಸಿದ್ದಾರೆ.
ಇದರ ಫಲವಾಗಿ ಸ್ಟಾರ್ ಏರ್ ವಿಮಾನವು ಬೆಳಗಾವಿ – ಮುಂಬೈ ನಡುವೆ ವಿಮಾನ ಹಾರಾಟವನ್ನು 29ನೇ ಮಾರ್ಚ, 2026 ರಿಂದ ಪ್ರಾರಂಭಿಸಲಿದೆ. ಮನವಿಗೆ ಸ್ಪಂದಿಸಿ, ಬೆಳಗಾವಿ-ಮುಂಬೈ-ಬೆಳಗಾವಿ ಮಾರ್ಗದಲ್ಲಿ ವಿಮಾನಯಾನ ಸೇವೆ ಪ್ರಾರಂಭ ಮಾಡಿ ಸಹಕರಿಸಿದ ಸ್ಟಾರ್ ಎರ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಘೋಡಾವತ್ ಇವರಿಗೆ ಧನ್ಯವಾದಗಳು’ ಎಂದು ಶೆಟ್ಟರ್ ತಿಳಿಸಿದ್ದಾರೆ.
ಈ ವಿಮಾನ ಸೇವೆ ವೇಳಾಪಟ್ಟಿ ವಿಮಾನ ಬೆಳಗಾವಿಯನ್ನು ( S5111) ಬೆಳಗ್ಗೆ 07:20ಕ್ಕೆ ಬಿಟ್ಟು ಮುಂಬೈಯನ್ನು ಬೆಳಗ್ಗೆ 08:25ಕ್ಕೆ ತಲುಪುವುದು. ಮುಂಬೈಯನ್ನು (S5112) ಸಂಜೆ 19:45ಕ್ಕೆ ಬಿಟ್ಟು ಬೆಳಗಾವಿ ನಗರವನ್ನು 20:50ಕ್ಕೆ ತಲುಪುವುದು.

