ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆ ಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಶಸ್ತ್ರ ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು ಎಂದು ಕೇಳಿದರು.
ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ ಅಷ್ಟೇ. ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ ಎಂದರು.
ಇನ್ನು ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ ಎಂದರು.
ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂಬ ವಿಚಾರವಾಗಿ ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ ಎಂದು ತಿಳಿಸಿದರು.
ಶಾಸಕರ ವಿಚಾರಧಾರೆ ಅವರಿಗೆ ಸಂಬಂಧಿಸಿದ್ದೇ ಹೊರತು, ನನಗಲ್ಲ. ಪಕ್ಷ ಅವರ ವಿಚಾರಗಳನ್ನು ಗಮನಿಸಲಿದೆ. ನಾವು ಆ ವಿಚಾರದಲ್ಲಿ ಹೇಳಲು ಬರುವುದಿಲ್ಲ ಎಂದರು.
ಇನ್ನು ಕೆಎಂಎಫ್ ಚುನಾವಣೆ ಯಾವಾಗ ಮಾಡಬೇಕು ಎಂದು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆಗ ಪಕ್ಷ ತೀರ್ಮಾನ ಮಾಡುವ ವ್ಯಕ್ತಿಯೇ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಗ್ಯಾರಂಟಿಯು ರಾಜ್ಯದ ಜನತೆಗೆ ಕೊಟ್ಟ ನಮ್ಮ ವಾಗ್ದಾನ. ನಾವು ಅದರಂತೆ ನಡೆಯಬೇಕು. ಪಕ್ಷದ ಅಧ್ಯಕ್ಷರು, ಸಿಎಂ ಸೇರಿದಂತೆ ಚುನಾವಣೆ ಎದುರಿಸಿದ ಎಲ್ಲರೂ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಗ್ಯಾರಂಟಿಗಳು ಹೊರೆಯಾದರೂ ಆಗಲಿ, ಬೇರೆಯಾದರೂ ಆಗಲಿ. ಮಾತು ಕೊಡುವ ಮುನ್ನ ಚಿಂತನೆ ಮಾಡಬೇಕಿತ್ತು. ಮಾತು ಕೊಟ್ಟಾಗಿದೆ. ಅದರಂತೆ ನಡೆಯಬೇಕು. ಐದು ವರ್ಷಗಳ ಕಾಲ ಎಷ್ಟೇ ಕಷ್ಟ ಆದರೂ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಡಬೇಕು. ಅದು ನಮ್ಮ ನಂಬಿಕೆ ಎಂದು ತಿಳಿಸಿದರು.
ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಪಡೆಯುತ್ತಿದ್ದರೆ ಅದು ತಪ್ಪು. ಬಡವರಿಗಾಗಿ ಗ್ಯಾರಂಟಿ ಯೋಜನೆ ತರಲಾಗಿದೆ. ಈ ಯೋಜನೆ ಎಲ್ಲರೂ ಬಳಸುತ್ತಿರುವ ಬಗ್ಗೆ ಕೆಲವರು ಮಾತನಾಡಿರಬಹುದು. ನಾವು ಕೊಟ್ಟಿರುವ ವಾಗ್ದಾನವನ್ನು ಅನುಷ್ಠಾನ ಮಾಡಲಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹಿಂದೆ ಸರಿದರೆ ಮಾತಿಗೆ ತಪ್ಪಿದಂತೆ ಆಗುತ್ತದೆ ಎಂದರು.

