ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದ ಸೂಚನೆ ಸಿಕ್ಕಿದೆ. ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿಯನ್ನು ನಡೆಸಿದೆ. ಇರಾನ್ ಅಧ್ಯಕ್ಷರ ಭವನಗಳನ್ನು ಗುರಿಯಾಗಿಸಿಕೊಂಡು ರಾಜಧಾನಿ ಮೇಲೆ ದಾಳಿ ಮಾಡಲಾಗಿದೆ.
ಇಸ್ರೇಲ್-ಇರಾನ್ ನಡುವಿನ ಪರಿಸ್ಥಿತಿ ಹಿನ್ನಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ತುರ್ತು ಎಚ್ಚರಿಕೆಯನ್ನು ನೀಡಲಾಗಿದೆ. ಇರಾನ್‌ನಿಂದ ಸಂಭಾವ್ಯ ದಾಳಿಗಳು ನಡೆಯುವ ನಿರೀಕ್ಷೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇರಾನ್ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಪ್ರತಿಕ್ರಿಯೆಯಾಗಿ ರಾಜಧಾನಿ ಮೇಲೆ ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಈ ದಾಳಿಯ ಕಾರಣದಿಂದ ಅಮೆರಿಕ-ಇರಾನ್ ರಾಜತಾಂತ್ರಿಕ ಮಾತುಕತೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಇರಾನ್ ದಾಳಿಯ ಸಾಧ್ಯತೆ ಹಿನ್ನಲೆಯಲ್ಲಿ ಇಸ್ರೇಲ್ ತನ್ನ ವಾಯುನೆಯಲ್ಲಿ ಎಲ್ಲಾ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಿದೆ. ಆಗಾಗ ಸೈರನ್‌ಗಳನ್ನು ಮೊಳಗಿಸಲಾಗುತ್ತಿದ್ದು, ಜನರು ಸದಾ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಲಾಗಿದೆ.
ಭಾರತೀಯರಿಗೆ ಅಲರ್ಟ್: ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತದ ಜನರಿಗೆ ಅಲರ್ಟ್ ಒಂದನ್ನು ನೀಡಿದೆ.
ಈ ಪ್ರದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಯಾವಾಗಲೂ ಎಚ್ಚರದಿಂದಿರಬೇಕು ಎಂದು ಸಲಹೆ ನೀಡಲಾಗಿದೆ.
- ಇಸ್ರೇಲಿ ಅಧಿಕಾರಿಗಳು ಮತ್ತು ‘ಹೋಮ್ ಫ್ರಂಟ್ ಕಮಾಂಡ್’ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳು ಹಾಗೂ ಸೂಚನೆಗಳನ್ನು ಭಾರತೀಯ ನಾಗರಿಕರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಲಹೆ ನೀಡಲಾಗಿದೆ.
- ಹೊಸ ಸೂಚನೆಗಳನ್ನು ಈ ಲಿಂಕ್‌ನಲ್ಲಿ ಪಡೆಯಬಹುದು ಎಂದು ಹೇಳಿದೆ. https://oref.org.il/eng
- ಎಲ್ಲಾ ಭಾರತೀಯ ನಾಗರಿಕರು ನಿಗದಿತ ಸುರಕ್ಷಿತ ಆಶ್ರಯ ತಾಣಗಳ (Shelters) ಹತ್ತಿರವೇ ಇರಬೇಕು ಮತ್ತು ತಮ್ಮ ನಿವಾಸ ಅಥವಾ ಕೆಲಸದ ಸ್ಥಳದ ಸಮೀಪವಿರುವ ರಕ್ಷಿತ ಸ್ಥಳಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದು ಮನವಿ ಮಾಡಿದೆ.
- ಮುಂದಿನ ಸೂಚನೆ ಬರುವವರೆಗೆ, ಇಸ್ರೇಲ್‌ನೊಳಗೆ ಅಗತ್ಯವಿಲ್ಲದ ಯಾವುದೇ ಪ್ರಯಾಣವನ್ನು ಕೈಗೊಳ್ಳದಂತೆ ಭಾರತೀಯ ನಾಗರಿಕರಿಗೆ ಸಲಹೆ ನೀಡಲಾಗಿದೆ.
- ಸ್ಥಳೀಯ ಸುದ್ದಿಗಳು, ಅಧಿಕೃತ ಪ್ರಕಟಣೆಗಳು ಮತ್ತು ತುರ್ತು ಎಚ್ಚರಿಕೆಗಳನ್ನು ನಿಯಮಿತವಾಗಿ ಗಮನಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
- ಯಾವುದೇ ತುರ್ತು ಸಂದರ್ಭದಲ್ಲಿ, ಭಾರತೀಯ ನಾಗರಿಕರು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಈ ಕೆಳಗಿನ 24×7 ಸಹಾಯವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು
- ದೂರವಾಣಿ: +972-54-7520711
- ಇ-ಮೇಲ್: [email protected]
ರಾಯಭಾರ ಕಚೇರಿಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಅಗತ್ಯವಿದ್ದಲ್ಲಿ ಮುಂದಿನ ಅಪ್‌ಡೇಟ್‌ಗಳನ್ನು ನೀಡುತ್ತಲೇ ಇರುತ್ತದೆ ಎಂದು ಜನರಿಗೆ ಮಾಹಿತಿ ನೀಡಲಾಗಿದೆ.
ಈ ದಾಳಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಇರಾನ್‌ನ ಹೆಮ್ಮೆಯ ಜನರೇ ಇವತ್ತು ರಾತ್ರಿ ನಾನು ನಿಮಗೆ ಹೇಳಬಯಸುತ್ತೇನೆ. ನಿಮ್ಮ ಸ್ವಾತಂತ್ರ್ಯದ ಸಮಯ ಹತ್ತಿರದಲ್ಲಿದೆ. ಸುರಕ್ಷಿತವಾಗಿರಿ, ನಿಮ್ಮ ಮನೆಯಿಂದ ಹೊರಗೆ ಬರಬೇಡಿ. ಹೊರಗೆ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ” ಎಂದು ತಿಳಿಸಿದ್ದಾರೆ.
“ನಾವು ದಾಳಿ ಮುಗಿಸಿದ ಬಳಿಕ ನಿಮ್ಮ ಸರ್ಕಾರವನ್ನು ವಶಪಡಿಸಿಕೊಳ್ಳಿ. ಅದು ನಿಮ್ಮದಾಗಲಿದೆ. ಇದು ಬಹುಶಃ ತಲೆಮಾರುಗಳವರೆಗೆ ಸಿಗುವ ನಿಮ್ಮ ಏಕೈಕ ಅವಕಾಶವಾಗಿದೆ. ಅನೇಕ ವರ್ಷಗಳಿಂದ, ನೀವು ಅಮೆರಿಕದ ಸಹಾಯವನ್ನು ಕೇಳಿದ್ದೀರಿ, ಆದರೆ ಅದು ನಿಮಗೆ ಸಿಕ್ಕಿರಲಿಲ್ಲ. ನಾನು ಇವತ್ತು ರಾತ್ರಿ ಮಾಡಲು ಹೊರಟಿರುವುದನ್ನು ಮಾಡಲು ಈ ಹಿಂದೆ ಯಾವ ಅಧ್ಯಕ್ಷರೂ ಸಿದ್ಧರಿರಲಿಲ್ಲ” ಎಂದು ಹೇಳಿದ್ದಾರೆ.

