ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ.
ಹೀಗೆ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ದೊಡ್ಡ ಮೊತ್ತ ಕಲೆಹಾಕದೇ ಇರುವುದು ಸದ್ಯ ಪಾಕ್ ಬಳಗದಲ್ಲಿ ಸಂತಸ ಮೂಡಿಸಿದೆ. ನ್ಯೂಜಿಲೆಂಡ್ ಈ ಪಂದ್ಯ ಸೋತರೆ ಪಾಕ್ ಮುಂದಿನ ಪಂದ್ಯದಲ್ಲಿ ದೊಡ್ಡ ಮೊತ್ತದಲ್ಲಿ ಗೆದ್ದು ನೆಟ್ ರನ್‌ರೇಟ್‌ನಲ್ಲಿ ಕಿವೀಸ್ ಹಿಂದಿಕ್ಕಿದರೆ ಸೆಮಿಫೈನಲ್ ಪ್ರವೇಶಿಸಲಿದೆ. ಒಂದುವೇಳೆ ಈ ಸಾಧಾರಣ ಮೊತ್ತವನ್ನು ಇಂಗ್ಲೆಂಡ್ ಬೆನ್ನತ್ತದೇ ಸೋತರೆ ಪಾಕ್ ಟೂರ್ನಿಯಿಂದ ಹೊರಬೀಳಲಿದೆ.
ಇನ್ನು ಇಂಗ್ಲೆಂಡ್ ಈ ಮೊತ್ತವನ್ನು ಎಷ್ಟು ಬೇಗ ಚೇಸ್ ಮಾಡುತ್ತದೆಯೋ ಅದರ ಆಧಾರದ ಮೇಲೆ ನ್ಯೂಜಿಲೆಂಡ್‌ನ ನೆಟ್ ರನ್‌ರೇಟ್ ಇಳಿಕೆಯಾಗಲಿದ್ದು, ಇದರ ಮೇಲೆ ಪಾಕ್ ಚಿತ್ತ ನೆಟ್ಟಿದೆ. ಇದರ ಆಧಾರದ ಮೇಲೆ ಪಾಕ್ ಲಂಕಾ ವಿರುದ್ಧ ಇಷ್ಟು ಓವರ್‌ಗಳಲ್ಲಿ ಚೇಸ್ ಮಾಡಿ ಗೆಲ್ಲಬೇಕು ಅಥವಾ ಇಷ್ಟು ರನ್‌ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಅವುಗಳ ಲೆಕ್ಕಾಚಾರ ಮುಂದಿದೆ.
ಇಂಗ್ಲೆಂಡ್ ಈ ಮೊತ್ತವನ್ನು 15 ಓವರ್‌ಗಳಲ್ಲಿ ಬಾರಿಸಿದರೆ, ಪಾಕ್ ಲಂಕಾ ವಿರುದ್ಧ 25 ರನ್‌ಗಳಿಂದ ಗೆಲ್ಲಬೇಕು ಅಥವಾ 17 ಓವರ್‌ಗೂ ಮುನ್ನ ಚೇಸ್ ಮಾಡಬೇಕಾಗುತ್ತದೆ.
ಇಂಗ್ಲೆಂಡ್ 17 ಓವರ್‌ಗಳಲ್ಲಿ ಚೇಸ್ ಮಾಡಿದರೆ ಪಾಕ್ ಲಂಕಾ ವಿರುದ್ಧ 45 ರನ್‌ಗಳಿಂದ ಗೆಲ್ಲಬೇಕು ಅಥವಾ 14 ಓವರ್‌ಗೂ ಮುಂಚೆ ಚೇಸ್ ಮಾಡಬೇಕು
ಇಂಗ್ಲೆಂಡ್ 19 ಓವರ್‌ಗಳಲ್ಲಿ ಚೇಸ್ ಮಾಡಿದರೆ ಪಾಕ್ ಲಂಕಾ ವಿರುದ್ಧ 65 ರನ್‌ಗಳಿಂದ ಗೆಲ್ಲಬೇಕು ಅಥವಾ ಲಂಕಾ ನೀಡುವ ಗುರಿಯನ್ನು 11 ಓವರ್‌ಗಳಲ್ಲಿ ಚೇಸ್ ಮಾಡಬೇಕು.

