ವಿಮಾನ ಟಿಕೆಟ್ ಬುಕ್ ಮಾಡಿದ ನಂತರ ಕೊನೆ ಕ್ಷಣದಲ್ಲಿ ಪ್ರಯಾಣ ರದ್ದಾದರೆ ಸಾವಿರಾರು ರೂಪಾಯಿ ಕ್ಯಾನ್ಸಲೇಶನ್ ಶುಲ್ಕ ಕಳೆದುಕೊಳ್ಳಬೇಕಲ್ಲ ಎಂಬ ಆತಂಕ ಇನ್ಮುಂದೆ ಬೇಡ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರಯಾಣಿಕರಿಗೆ ‘ಲುಕ್-ಇನ್ ಆಪ್ಷನ್’ (Look-in Option) ಎಂಬ ವಿಶೇಷ ಸೌಲಭ್ಯವನ್ನು ನೀಡಿದೆ. ಈ ಹೊಸ ನಿಯಮದ ಅನ್ವಯ, ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗಾಗಿ ಅದನ್ನು ರದ್ದುಗೊಳಿಸಿದರೆ ಯಾವುದೇ ಶುಲ್ಕ ಅಥವಾ ಪೆನಾಲ್ಟಿ ಪಾವತಿಸಬೇಕಿಲ್ಲ.
ಹೌದು. ವಿಮಾನ ಟಿಕೆಟ್ ಬುಕ್ ಮಾಡಿದ ನಂತರ ಪ್ಲಾನ್ ಬದಲಾದರೆ ಕ್ಯಾನ್ಸಲೇಶನ್ ಚಾರ್ಜ್ ರೂಪದಲ್ಲಿ ಸಾವಿರಾರು ರೂಪಾಯಿ ನಷ್ಟವಾಗುತ್ತದೆ ಎಂದು ಭಯಪಡುವವರಿಗೆ ಡಿಜಿಸಿಎ ನೆಮ್ಮದಿಯ ಸುದ್ದಿ ನೀಡಿದೆ. ಹೊಸ ನಿಬಂಧನೆಗಳ ಪ್ರಕಾರ, ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತಾ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
‘ಲುಕ್-ಇನ್ ಆಪ್ಷನ್’ (Look-in Option) ಎಂದರೇನು?
ವಿಮಾನಯಾನ ಸಂಸ್ಥೆಗಳು ಇನ್ಮುಂದೆ ಪ್ರಯಾಣಿಕರಿಗೆ 48 ಗಂಟೆಗಳ ಕಾಲ ‘ಲುಕ್-ಇನ್ ಆಪ್ಷನ್’ ನೀಡಬೇಕು.
- ಉಚಿತ ರದ್ದತಿ: ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗಾಗಿ ಅದನ್ನು ರದ್ದುಗೊಳಿಸಿದರೆ ಯಾವುದೇ ಪೆನಾಲ್ಟಿ (ದಂಡ) ಇರುವುದಿಲ್ಲ.
- ಬದಲಾವಣೆಗಳು: ಪ್ರಯಾಣದ ದಿನಾಂಕ ಅಥವಾ ಸಮಯದಲ್ಲಿ ಬದಲಾವಣೆಗಳನ್ನು ಸಹ ಉಚಿತವಾಗಿ ಮಾಡಿಕೊಳ್ಳಬಹುದು. (ಗಮನಿಸಿ: ಹೊಸ ದಿನಾಂಕದ ಟಿಕೆಟ್ ದರ ಹೆಚ್ಚಿದ್ದರೆ, ಆ ವ್ಯತ್ಯಾಸದ ಮೊತ್ತವನ್ನು ಮಾತ್ರ ಪ್ರಯಾಣಿಕರು ಪಾವತಿಸಬೇಕಾಗುತ್ತದೆ).
ಪ್ರಮುಖ ಷರತ್ತುಗಳು:
ಈ ಲುಕ್-ಇನ್ ಆಪ್ಷನ್ ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರಯಾಣದ ದಿನಾಂಕಕ್ಕೆ ಕನಿಷ್ಠ ಇಷ್ಟು ದಿನಗಳ ಮುಂಚಿತವಾಗಿ ಬುಕ್ ಮಾಡಿದ ಟಿಕೆಟ್ಗಳಿಗೆ ಮಾತ್ರ ಇದು ಅನ್ವಯಿಸುತ್ತದೆ:
- ದೇಶೀಯ ವಿಮಾನಗಳು (Domestic): ಪ್ರಯಾಣದ ದಿನಾಂಕಕ್ಕೆ ಕನಿಷ್ಠ 7 ದಿನಗಳ ಮೊದಲು ಟಿಕೆಟ್ ಬುಕ್ ಮಾಡಿರಬೇಕು.
- ಅಂತರಾಷ್ಟ್ರೀಯ ವಿಮಾನಗಳು (International): ಪ್ರಯಾಣದ ದಿನಾಂಕಕ್ಕೆ ಕನಿಷ್ಠ 15 ದಿನಗಳ ಮೊದಲು ಬುಕ್ ಮಾಡಿದ ಟಿಕೆಟ್ಗಳಿಗೆ ಮಾತ್ರ ಈ ಸೌಲಭ್ಯವಿರುತ್ತದೆ.
ಹೆಸರು ಬದಲಾವಣೆ ಮತ್ತು ರೀಫಂಡ್ ಕಾಲಮಿತಿ:
- ಹೆಸರು ತಿದ್ದುಪಡಿ: ವೆಬ್ಸೈಟ್ ಮೂಲಕ ನೇರವಾಗಿ ಬುಕ್ ಮಾಡಿದವರು 24 ಗಂಟೆಗಳ ಒಳಗಾಗಿ ಹೆಸರಿನಲ್ಲಿ ಏನಾದರೂ ತಪ್ಪುಗಳಿದ್ದರೆ ಉಚಿತವಾಗಿ ಸರಿಪಡಿಸಿಕೊಳ್ಳಬಹುದು.
- ರೀಫಂಡ್ (Refund): ಟ್ರಾವೆಲ್ ಏಜೆಂಟ್ಗಳ ಮೂಲಕ ಬುಕ್ ಮಾಡಿದರೂ, ರೀಫಂಡ್ ಮಾಡುವ ಜವಾಬ್ದಾರಿ ವಿಮಾನಯಾನ ಸಂಸ್ಥೆಗಳದ್ದೇ ಆಗಿರುತ್ತದೆ. ಖಚಿತವಾಗಿ 14 ಕೆಲಸದ ದಿನಗಳ ಒಳಗಾಗಿ ಹಣವನ್ನು ವಾಪಸ್ ಮಾಡಬೇಕು.
ವೈದ್ಯಕೀಯ ತುರ್ತು ಪರಿಸ್ಥಿತಿ (Medical Emergency) ನಿಯಮಗಳು:
ಅತ್ಯಂತ ತುರ್ತು ಆರೋಗ್ಯ ಪರಿಸ್ಥಿತಿಗಳಲ್ಲಿ ಟಿಕೆಟ್ ರದ್ದುಗೊಳಿಸಿದರೆ ಪೂರ್ಣ ರೀಫಂಡ್ ಅಥವಾ ‘ಕ್ರೆಡಿಟ್ ಶೆಲ್’ (ನಂತರದ ಪ್ರಯಾಣಕ್ಕೆ ಬಳಸಿಕೊಳ್ಳುವ ಸೌಲಭ್ಯ) ಪಡೆಯುವ ಅವಕಾಶವಿದೆ.
- ಪ್ರಯಾಣಿಕ ಅಥವಾ ಅದೇ PNR ಸಂಖ್ಯೆಯಲ್ಲಿರುವ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದರೆ ಈ ಸೌಲಭ್ಯ ಲಭ್ಯವಿರುತ್ತದೆ.
- ಇತರ ಅನಾರೋಗ್ಯದ ಕಾರಣಗಳಿದ್ದರೆ, ಡಿಜಿಸಿಎ ಸೂಚಿಸಿದ ವೈದ್ಯರ ದೃಢೀಕರಣ ಪತ್ರದ ಆಧಾರದ ಮೇಲೆ ರೀಫಂಡ್ ನೀಡಲಾಗುತ್ತದೆ.

