ಬೆಂಗಳೂರು: ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಗೈರಾಗಿ ಸಾಮೂಹಿಕ ಮುಷ್ಕರ ಕೈಗೊಂಡಲ್ಲಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ,
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳು ಮಾರ್ಚ್ 11 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಹೇಳಿವೆ.
ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಂಬಡ್ತಿ, ಕರ್ತವ್ಯದ ವೇಳೆ ಖಾಸಗಿ ವ್ಯವಸ್ಥೆಗೆ ಅವಕಾಶ ಸೇರಿ 14 ಬೇಡಿಕೆಗಳ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಆರೋಗ್ಯ ಸೇವೆಗಳಿಗೆ ಅಡ್ಡಿಪಡಿಸದಂತೆ ನೌಕರರು ಕಾನೂನಿನ ಅಡಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.
ರೋಗಿಗಳ ಆರೋಗ್ಯ ಕಾಪಾಡುವ ಮಹತ್ವದ ಜವಾಬ್ದಾರಿ ವೈದ್ಯರು ಮತ್ತು ಇತರೆ ಸಿಬ್ಬಂದಿ ಹೊಂದಿರುವುದರಿಂದ ಸಾಮೂಹಿಕ ಮುಷ್ಕರದಂತಹ ಕ್ರಮಗಳಿಂದ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ಕಾನೂನಿನ ರೀತಿ ಕ್ರಮ ಜರುಗಿಸುವುದಾಗಿ ಇಲಾಖೆಯ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.

