ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಟಾಸ್ ಸೋತ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಕಳೆದ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಂಡಿದ್ದಾರೆ. ರಿಂಕು ಸಿಂಗ್ ಕುಟುಂಬ ಸಮಸ್ಯೆಯಿಂದಾಗಿ ತೆರಳಿದ್ದು, ಅದೇ ಜಾಗಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಕರೆತಂದಿದ್ದಾರೆ. ಆದರೂ ಕಳೆದ ಪಂದ್ಯದಲ್ಲಿ ತಂಡ ಹೀನಾಯ ಪ್ರದರ್ಶನ ಕಂಡ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಅಷ್ಟೇ ಸತ್ಯ.
ಏಕೆಂದರೆ ಸಂಜು ಸ್ಯಾಮ್ಸನ್ ತಂಡಕ್ಕೆ ಬರುತ್ತಿದ್ದಂತೆ ಅವರಿಗೆ ಆರಂಭಿಕನ ಸ್ಥಾನ ನೀಡಿ ಇಶಾನ್ ಕಿಶನ್ರನ್ನು ಮೂರನೇ ಕ್ರಮಾಂಕಕ್ಕೆ ತಳ್ಳಲಾಗಿದೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಟಿ ಟ್ವೆಂಟಿಯಲ್ಲೂ ಏಕದಿನ ಮಾದರಿಯಲ್ಲಿ ಆಟವಾಡುತ್ತಿದ್ದ ತಿಲಕ್ ವರ್ಮಾರನ್ನು ಐದನೇ ಕ್ರಮಾಂಕಕ್ಕೆ ಹಾಕಲಾಗಿದೆ.
ಇನ್ನು ಕಳೆದ ಪಂದ್ಯದಲ್ಲಿ ಭಾರತ ವೇಗವಾಗಿ ತನ್ನ ಟಾಪ್ ಆರ್ಡರ್ ಕಳೆದುಕೊಂಡಾಗ ಕಣಕ್ಕಿಳಿದು ಒತ್ತಡವನ್ನು ನಿಭಾಯಿಸಬಲ್ಲ ಸಾಮರ್ಥ್ಯವಿದ್ದ ತಂಡದ ಉಪ ನಾಯಕ ಅಕ್ಸರ್ ಪಟೇಲ್ರನ್ನು ಬೆಂಚ್ ಕಾಯಲು ಹೇಳಿ ವಾಷಿಂಗ್ಟನ್ ಸುಂದರ್ನನ್ನು ಕಣಕ್ಕಿಳಿಸಿ ತಲೆಕೆಟ್ಟ ಕೆಲಸ ಮಾಡಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಿಂದ ಸುಂದರ್ನನ್ನು ಹೊರಗಿಟ್ಟು ಅಕ್ಸರ್ ಪಟೇಲ್ರನ್ನು ವಾಪಸ್ ತಂಡಕ್ಕೆ ಕರೆತಂದಿದ್ದಾರೆ.
ಹೀಗೆ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಭಾರೀ ಟೀಕೆ ಹಾಗೂ ಟ್ರೋಲ್ ಎದುರಿಸಿದ ಭಾರತ ತಂಡ ತನ್ನ ಆಡುವ ಬಳಗದಲ್ಲಿ ಮಾಡಿಕೊಂಡಿರುವ ಬದಲಾವಣೆ ತಂಡದ ಓಪನಿಂಗ್ ಮೇಲೆ ಪ್ರಭಾವ ಬೀರಿದ್ದು, ತಂಡ ಉತ್ತಮ ಆರಂಭ ಪಡೆದುಕೊಂಡಿದೆ.

