ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸದ್ಯ ಭಾರೀ ಚರ್ಚೆಯ ವಿಚಾರ. ಧಾರವಾಡದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಈ ಬಗ್ಗೆ ಬೃಹತ್ ಹೋರಾಟ ಮಾಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸರ್ಕಾರಿ ನೇಮಕಾತಿಗಳಲ್ಲಿ ಒಳಮೀಸಲಾತಿಯ ಸಮಸ್ಯೆಯಿಂದ ವಿಳಂಬವಾಗಿತ್ತಾದರೂ, ಸದ್ಯದಲ್ಲಿಯೇ ನೇಮಕಾತಿಯನ್ನು ಪ್ರಾರಂಭಿಸಿ, ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದು ಸರ್ಕಾರಿ ನೇಮಕಾತಿಗಳನ್ನು ಮಾಡಲಿದ್ದು, ಈ ಬಗ್ಗೆ ಬಜೆಟ್ ನಲ್ಲಿಯೂ ಘೋಷಣೆ ಮಾಡಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಈಗ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ರಿ.) ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೇಳಿಕೆ ಸರ್ಕಾರಿ ಇಲಾಖೆಗಳು ಮತ್ತು ನಿಗಮ/ ಮಂಡಳಿಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ಆಗ್ರಹ ಎಂಬ ವಿಷಯವನ್ನು ಒಳಗೊಂಡಿದೆ.
ಪ್ರಕಟಣೆಯ ವಿವರಗಳು: ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಜನತೆ ಧಾರವಾಡದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಮೂರು ದಶಕಗಳ ಹಿಂದೆ ಮಂಜೂರಾಗಿರುವ ಒಟ್ಟು 7.72 ಲಕ್ಷ ಹುದ್ದೆಗಳ ಪೈಕಿ ಅಂದಾಜು 2.85 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು ಅನೇಕ ಇಲಾಖೆಗಳಲ್ಲಿ ಶೇ.60 ರಷ್ಟು ಪ್ರಮಾಣದಲ್ಲಿ ಖಾಲಿ ಹುದ್ದೆಗಳಿವೆ.
ಇದಲ್ಲದೇ, ಸರ್ಕಾರಿ ಅಧೀನದ ನಿಗಮ/ ಮಂಡಳಿಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಕಾಲಾನುಕ್ರಮವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ಸೃಜಿಸುವುದಕ್ಕೆ ಬದಲಾಗಿ ವಿಶ್ವಬ್ಯಾಂಕ್ ಮತ್ತು ಐ.ಎಂ.ಎಫ್ ಸಂಸ್ಥೆಗಳ ಅಣತಿಯಂತೆ ಸರ್ಕಾರಿ ವಲಯವನ್ನು ಗೌಣವಾಗಿಸಲಾಗುತ್ತಿದೆ ಎಂದು ಆರೋಪಿಸಿದೆ.
ಕೇಂದ್ರ ಸರ್ಕಾರದ ನವ ಉದಾರವಾದಿ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಖಾಸಗಿ ವಲಯದಲ್ಲಿಯೂ ಉದ್ಯೋಗ ಸೃಜನೆಗೆ ಹಿನ್ನಡೆಯಾಗಿದ್ದು ಯುವಜನತೆ ಹತಾಶರಾಗಿದ್ದಾರೆ. ಮತ್ತೊಂದೆಡೆ ಹಾಲಿ ನೌಕರರ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಿದೆ.
2001ರ ಹಾರನಹಳ್ಳಿ ರಾಮಸ್ವಾಮಿ ಆಡಳಿತ ಸುಧಾರಣೆ ಆಯೋಗ ಮತ್ತು ಇತ್ತೀಚಿನ ಆಯೋಗ-2ರ ಶಿಫಾರಸ್ಸುಗಳು ಸರ್ಕಾರಿ ಹುದ್ದೆಗಳ ಕಡಿತವನ್ನು ಗುರಿಯಾಗಿಸಿಕೊಂಡಿದ್ದು, ಸತತವಾಗಿ ಬಂದ ರಾಜ್ಯ ಸರ್ಕಾರಗಳು ಸಮಾಲೋಚನೆಯೇ ಇಲ್ಲದೇ ಜನ-ವಿರೋಧಿ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಮೂಲಕ ಖಾಲಿ ಹುದ್ದೆ ಭರ್ತಿ ಮಾಡದೇ ಹೊರಗುತ್ತಿಗೆ/ ಗುತ್ತಿಗೆ ನೇಮಕಾತಿಯನ್ನು ವ್ಯಾಪಕಗೊಳಿಸಿದವು.
ಇದರಿಂದಾಗಿ ಅಂದಾಜು 3.0 ಲಕ್ಷ ಹೊರಗುತ್ತಿಗೆ ನೌಕರರು ಹೊರಗುತ್ತಿಗೆ ಏಜೆನ್ಸಿಗಳ ಶೋಷಣೆಯೊಂದಿಗೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲೇ ಅಂದಾಜು 80,000 ಹುದ್ದೆಗಳು ಖಾಲಿಯಿದ್ದು, ಸರ್ಕಾರಿ ಶಾಲೆಗಳು ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ದೂಡಲಾಗಿದೆ.
ಆರೋಗ್ಯ ಇಲಾಖೆಯಲ್ಲಿಯೂ 37,500 ಹುದ್ದೆಗಳು ಖಾಲಿ ಬಿದ್ದಿವೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದು, ಅದು ಕೇವಲ ಘೋಷಣೆಯಾಗಿಯೇ ಉಳಿದಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯದ ಯುವಜನತೆಗೆ ಗುಣಮಟ್ಟದ ಉದ್ಯೋಗವಕಾಶಗಳನ್ನು ಒದಗಿಸಲು ಆ ಮೂಲಕ ರಾಜ್ಯದ ಆರ್ಥಿಕತೆ ಬಲಪಡಿಸಲು ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಮತ್ತು ನಿಗಮ/ ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಆಗ್ರಹಿಸಿದೆ.

