ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಸ್ರೇಲ್‌ಗೆ ಕೈಗೊಂಡ ಐತಿಹಾಸಿಕ ಭೇಟಿಯ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನವು ವಿಶ್ವದ ಗಮನ ಸೆಳೆದಿದೆ. ವಿಮಾನಗಳ ಸಂಚಾರವನ್ನು ನೇರವಾಗಿ ತೋರಿಸುವ ‘ಫ್ಲೈಟ್‌ರೇಡಾರ್ 24’ (Flightradar24) ಪೋರ್ಟಲ್‌ನಲ್ಲಿ ಪ್ರಧಾನಿಯವರ ವಿಮಾನವು ಜಾಗತಿಕವಾಗಿ ಅತಿ ಹೆಚ್ಚು ಜನರು ವೀಕ್ಷಿಸಿದ (Tracked) ವಿಮಾನವಾಗಿ ಹೊರಹೊಮ್ಮಿದೆ.
ಹೌದು. ಬುಧವಾರ ಸಂಜೆ ಸುಮಾರು 4 ಗಂಟೆಯ ಹೊತ್ತಿಗೆ (IST), ಪ್ರಧಾನಿಯವರ ವಿಮಾನವು ಸೌದಿ ಅರೇಬಿಯಾದ ಆಕಾಶ ಮಾರ್ಗದ ಮೂಲಕ ತೆಲ ಅವಿವ್‌ಗೆ ಸಾಗುತ್ತಿದ್ದಾಗ, ಏಕಕಾಲದಲ್ಲಿ 9,225ಕ್ಕೂ ಹೆಚ್ಚುಮಂದಿ ಆನ್‌ಲೈನ್‌ನಲ್ಲಿ ಇದನ್ನು ಲೈವ್ ಆಗಿ ಟ್ರ್ಯಾಕ್ ಮಾಡುತ್ತಿದ್ದರು.ಪ್ರಧಾನಿ ಮೋದಿಯವರ ಅಧಿಕೃತ ವಿಮಾನ ‘ಇಂಡಿಯಾ ಒನ್’, ಬುಧವಾರ ಬೆಳಿಗ್ಗೆ 9 ಗಂಟೆಗೆ ನವದೆಹಲಿಯಿಂದ ಹೊರಟು ಸುಮಾರು 6 ಗಂಟೆಗಳ ಕಾಲ ಪ್ರಯಾಣಿಸಿ ಸಂಜೆ 4:15ಕ್ಕೆ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ಸೌದಿ ಆಕಾಶ ಮಾರ್ಗ: ಮೋದಿಯವರ ವಿಮಾನವು ಸೌದಿ ಅರೇಬಿಯಾದ ಮೇಲೆ ಹಾರಾಟ ನಡೆಸುತ್ತಿರುವುದನ್ನು ಫ್ಲೈಟ್‌ರೇಡಾರ್ 24 ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಶೇಷವಾಗಿ ಹಂಚಿಕೊಂಡಿತ್ತು.
ಐತಿಹಾಸಿಕ ಭೇಟಿ: ಇದು ಮೋದಿಯವರ ಎರಡನೇ ಇಸ್ರೇಲ್ ಭೇಟಿಯಾಗಿದ್ದು, ಅವರು ಇಸ್ರೇಲ್ ಸಂಸತ್ತಾದ ‘ಕೆನೆಸೆಟ್’ (Knesset) ಅನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ನಾಯಕ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.ಪ್ರಧಾನಿ ಮೋದಿಯವರ ಇಸ್ರೇಲ್ ಪ್ರಯಾಣವು ಕೇವಲ ರಾಜತಾಂತ್ರಿಕವಾಗಿ ಮಾತ್ರವಲ್ಲದೆ, ತಂತ್ರಜ್ಞಾನ ಲೋಕದಲ್ಲೂ ಭಾರಿ ಸಂಚಲನ ಮೂಡಿಸಿ “ವಿಶ್ವದ ಅತ್ಯಂತ ಜನಪ್ರಿಯ ವಿಮಾನ ಪ್ರಯಾಣ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

