ಬೆಂಗಳೂರು: ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಕಬ್ಬು ಬೆಳೆಗಾರರಿಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
2025- 26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪ್ರತಿ ಟನ್ ಗೆ ರೂ. 50 ಆರ್ಥಿಕ ನೆರವಿನ ಮೊತ್ತದ ಅನ್ವಯ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 300 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್.ಆರ್.ಪಿ. ಮೇಲೆ 100 ರೂ. ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಲಾಗಿತ್ತು. ಆರ್ಥಿಕ ನೆರವಿನಲ್ಲಿ ರಾಜ್ಯ ಸರ್ಕಾರ ರೂ. 50, ಸಕ್ಕರೆ ಕಾರ್ಖಾನೆಗಳು 50 ರೂ. ನೀಡುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು.
ಅಂತೆಯೇ ಸರ್ಕಾರದ ಪಾಲಿನ ಆರ್ಥಿಕ ನೆರವಿನ ಹಣ ರೂ.300 ಕೋಟಿ ಬಿಡುಗಡೆ ಮಾಡಲಾಗಿದೆ. ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆ ಆಧರಿಸಿ ಕಬ್ಬು ಅಭಿವೃದ್ಧಿ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಕಬ್ಬಿನ ಪ್ರಮಾಣ ಆಧರಿಸಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ಟನ್ ಗೆ 50 ರೂ.ಗಳಂತೆ ಜಮಾ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಕೂಡ ಪ್ರತಿ ಟನ್ ಕಬ್ಬಿಗೆ ರೂ.50 ಆರ್ಥಿಕ ನೆರವು ನೀಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

