ಜಪಾನ್:ಸಾಮಾನ್ಯವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ದಾನ ಎಂದರೆ ನಮಗೆ ನೆನಪಾಗುವುದು ಭಾರತದ ಶ್ರೀಮಂತ ದೇವಸ್ಥಾನಗಳು. ಆದರೆ ಜಪಾನ್ನ ಒಸಾಕಾ ನಗರದಲ್ಲಿ ನಡೆದ ಈ ಘಟನೆ ಇಡೀ ವಿಶ್ವದ ಗಮನ ಸೆಳೆದಿದೆ. ಒಬ್ಬ ವ್ಯಕ್ತಿ ತನ್ನ ನಗರದ ಮೂಲಸೌಕರ್ಯಕ್ಕಾಗಿ ಬರೋಬ್ಬರಿ 21 ಕೆಜಿ ಚಿನ್ನ ದಾನ ಮಾಡುವ ಮೂಲಕ ನಾಗರಿಕ ಪ್ರಜ್ಞೆಯ ಹೊಸ ಪಾಠ ಕಲಿಸಿದ್ದಾನೆ.
ಸಾಮಾನ್ಯವಾಗಿ ಧಾರ್ಮಿಕ ಕೇಂದ್ರಗಳಿಗೆ ಇಂತಹ ದೊಡ್ಡ ದೇಣಿಗೆ ಬರುವುದು ಸಹಜ. ಆದರೆ, ಜಪಾನ್ನ ಒಸಾಕಾದಲ್ಲಿ ವ್ಯಕ್ತಿಯೊಬ್ಬರು ನಗರದ ಚರಂಡಿ ಮತ್ತು ನೀರಿನ ಪೈಪ್ಲೈನ್ ದುರಸ್ತಿಗಾಗಿಯೇ 30 ಕೋಟಿ ರೂ. ಬೆಲೆಬಾಳುವ ಚಿನ್ನವನ್ನು ದಾನ ಮಾಡಿ ಮಾದರಿಯಾಗಿದ್ದಾರೆ
ಪತ್ರದಲ್ಲಿತ್ತು ಒಂದೇ ಒಂದು ಮನವಿ
ತನ್ನ ಹೆಸರನ್ನು ಬಹಿರಂಗಪಡಿಸಲು ಇಷ್ಟಪಡದ ಅನಾಮಿಕ ವ್ಯಕ್ತಿಯೊಬ್ಬರು, ಒಸಾಕಾ ಮೇಯರ್ ಕಚೇರಿಗೆ 21 ಕೆಜಿ ಚಿನ್ನವನ್ನು ಕಳುಹಿಸಿದ್ದಾರೆ. ನಗರದ ಜನಸಾಮಾನ್ಯರ ಮೂಲಭೂತ ಸೌಕರ್ಯಗಳಾದ ಚರಂಡಿ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸಲು ಈ ಸಂಪತ್ತನ್ನು ವಿನಿಯೋಗಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ
ಈ ಅನಾಮಿಕ ದಾನಿ ಇಷ್ಟು ದೊಡ್ಡ ನಿರ್ಧಾರ ತಳೆಯಲು ಕಾರಣ ಮಾಧ್ಯಮಗಳು ನಗರದಲ್ಲಿ ಪದೇ ಪದೇ ನೀರಿನ ಪೈಪ್ಗಳು ಒಡೆದು ನೀರು ಪೋಲಾಗುತ್ತಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿ ಮರುಗಿದ ಈತ, ಸರ್ಕಾರಕ್ಕೆ ನೆರವಾಗಲು ಮುಂದಾಗಿದ್ದಾನೆ. ವಿಶೇಷವೆಂದರೆ, ಈ ಚಿನ್ನ ನೀಡುವ ಒಂದು ತಿಂಗಳ ಮುಂಚೆಯೇ ಇವರು 2.5 ಲಕ್ಷ ರೂ. ನಗದು ದಾನವನ್ನೂ ಮಾಡಿದ್ದರು.
ಮೇಯರ್ ಕಣ್ಣಾಲಿಗಳು ತೇವ
ಘಟನೆಯ ಬಗ್ಗೆ ಮಾತನಾಡಿದ ಒಸಾಕಾ ಮೇಯರ್ ಹಿದೆಯುಕಿ ಯೊಕೊಯಾಮಾ, “ಚಿನ್ನ ಮತ್ತು ಪತ್ರ ನೋಡಿ ನನಗೆ ಮಾತುಗಳೇ ಹೊರಡಲಿಲ್ಲ. ಬಜೆಟ್ ಕೊರತೆಯಿಂದ ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಈ ದಾನ ದೊಡ್ಡ ಶಕ್ತಿ ನೀಡಿದೆ,” ಎಂದು ಭಾವುಕರಾಗಿ ನುಡಿದಿದ್ದಾರೆ.
ಈಗಾಗಲೇ ಶುರುವಾಗಿದೆ ಕಾಮಗಾರಿ
ಮೇಯರ್ ಕಚೇರಿ ಈ ಚಿನ್ನವನ್ನು ನಗದಾಗಿ ಪರಿವರ್ತಿಸಿದ್ದು, ಸುಮಾರು 2 ಕಿಲೋಮೀಟರ್ ಉದ್ದದ ಹಳೆಯ ಪೈಪ್ಲೈನ್ಗಳನ್ನು ಬದಲಾಯಿಸಲು ಆದೇಶ ನೀಡಿದೆ. ನಗರದಲ್ಲಿ ಈಗಾಗಲೇ ಕೆಲಸಗಳು ಆರಂಭವಾಗಿವೆ.
ಭಾರತದಲ್ಲಿ 2022ರಲ್ಲಿ ಕಾಶಿ ವಿಶ್ವನಾಥನಿಗೆ 60 ಕೆಜಿ ಚಿನ್ನ ದಾನ ಬಂದ ಇತಿಹಾಸವಿದೆ. ಆದರೆ, ಧಾರ್ಮಿಕ ಕೇಂದ್ರಗಳಿಗಿಂತ ಮಿಗಿಲಾಗಿ ಸಾರ್ವಜನಿಕ ಸೌಲಭ್ಯಕ್ಕೆ ಇಷ್ಟು ದೊಡ್ಡ ಮೊತ್ತದ ಚಿನ್ನ ದಾನ ಮಾಡಿರುವುದು ನಾಗರಿಕ ಜವಾಬ್ದಾರಿಯ ಅತ್ಯುನ್ನತ ಉದಾಹರಣೆಯಾಗಿದೆ.

