ಬೆಂಗಳೂರು: ಸ್ವಯಂ ಚಾಲಿತ ಮ್ಯುಟೇಶನ್ ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹೊಸ ತಂತ್ರಾಂಶಕ್ಕೆ ಸಚಿವರು ಚಾಲನೆ ನೀಡಿದ್ದಾರೆ.
ಎಲ್ಲಾ ಏಳು ದಿನ ಮತ್ತು ಹದಿನೈದು ದಿನಗಳ ನೋಟಿಸ್ ಅವಧಿ ಹೊಂದಿದ ಮ್ಯುಟೇಶನ್ ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ಬಳಿಕ ತಂತ್ರಾಂಶದ ಮೂಲಕ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಗೊಳ್ಳುವ ಹೊಸ ವ್ಯವಸ್ಥೆ ಇದಾಗಿದೆ.
ಇದರಿಂದಾಗಿ ನೋಟಿಸ್ ಅವಧಿ ಹೊಂದಿರುವ ಮ್ಯುಟೇಶನ್ ಗಳು ಕ್ರಯ, ವಿಭಾಗ, ದಾನ, ಪೌತಿ, ಬಿಲ್ ಮೊದಲಾದವು ಸ್ವಯಂ ಚಾಲಿತವಾಗಿ ಅನುಮೋದನೆಗೊಳ್ಳಲಿವೆ. ನೋಟಿಸ್ ಅವಧಿ ಒಳಗೆ ಕಂದಾಯ ನಿರೀಕ್ಷಕರು ಅಥವಾ ಸಾರ್ವಜನಿಕರು ಯಾವುದೇ ತಕರಾರು ನೀಡಿದಲ್ಲಿ ಅಂತಹ ಮ್ಯುಟೇಶನ್ ಗಳನ್ನು ಪೂರ್ಣಗೊಳಿಸದೆ ತಂತ್ರಾಂಶದ ತಹಶೀಲ್ದಾರ್ ನ್ಯಾಯಾಲಯಕ್ಕೆ ಆ ಪ್ರಕರಣ ವರ್ಗಾಯಿಸಿ ಅವರ ನಿರ್ಧಾರದಂತೆ ಮುಂದಿನ ಕ್ರಮ ವಹಿಸಲಾಗುವುದು.
ಮ್ಯುಟೇಶನ್ ಗಳಿಗೆ ಆಕ್ಷೇಪಣೆ ಅಥವಾ ಅನುಮೋದನೆ ನೀಡಬೇಕಾದಲ್ಲಿ ರಾಜಸ್ವ ನಿರೀಕ್ಷಕರು ತಾಲೂಕು ಕಚೇರಿಗೆ ಬಂದು ಸಲ್ಲಿಸಬೇಕಿತ್ತು. ಈಗ ರಾಜಸ್ವ ನಿರೀಕ್ಷಕರಿಗೆ ಲಾಗಿನ್ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇನ್ನು ಪಹಣಿಗಳಿಗೆ ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ. ಇದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು. ಪಹಣಿಯಲ್ಲಿ ಏನೇ ಬದಲಾವಣೆಯಾದರೂ ಮಾಲೀಕರಿಗೆ ಎಸ್ಎಂಎಸ್ ಮೂಲಕ ಸಂದೇಶ ಬರಲಿದೆ ಎಂದು ತಿಳಿಸಿದ್ದಾರೆ.

