ಬೆಂಗಳೂರು: ಸಿಇಟಿ(UGCET-26), ನೀಟ್(UGNEET-26) ಇವೆರಡೂ ಪ್ರತ್ಯೇಕ ಪರೀಕ್ಷೆಗಳು. ಹೀಗಾಗಿ ಇವೆರಡಕ್ಕೂ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು. ಈ ವಿಷಯದಲ್ಲಿ ಗೊಂದಲ ಬೇಡ.
ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಕೋರ್ಸ್ ಗಳು, ನ್ಯಾಚುರೋಪತಿ ಮತ್ತು ಯೋಗ, ಬಿ.ಎಸ್ ಸಿ ನರ್ಸಿಂಗ್, ಬಿ-ಫಾರ್ಮಾ, ಫಾರ್ಮಾ-ಡಿ… ಈ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಿಇಟಿ ಪರೀಕ್ಷೆ ನಡೆಸಿ, ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಪ್ರಕ್ರಿಯೆಯನ್ನೂ ಮಾಡುತ್ತದೆ.
ಆದರೆ, ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ NTA ನೀಟ್ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು KEA ಮಾಡುತ್ತದೆ. ಹೀಗಾಗಿ ನೀಟ್ ಪರೀಕ್ಷೆ ಸಲುವಾಗಿ NTA ಗೆ ಅರ್ಜಿ ಸಲ್ಲಿಸಿದವರು ಕೌನ್ಸೆಲಿಂಗ್ ಸಲುವಾಗಿ KEA ಯಲ್ಲೂ ಅರ್ಜಿ ಸಲ್ಲಿಸುವುದು ಕಡ್ಡಾಯ. ಕೇವಲ ವೈದ್ಯಕೀಯ ಕೋರ್ಸ್ ಪ್ರವೇಶದ ಉದ್ದೇಶ ಇದ್ದರೂ KEA ನಲ್ಲಿ ಅರ್ಜಿ ಸಲ್ಲಿಸಬೇಕು. ನೀಟ್ ಫಲಿತಾಂಶ ಬಂದ ನಂತರ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಲಾಗುವುದು.
ರಾಜ್ಯದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಸೇರಿ ಎಲ್ಲ ಕೋರ್ಸ್ ಗಳಿಗೂ ಸೀಟು ಹಂಚಿಕೆಯನ್ನು ಏಕಕಾಲಕ್ಕೆ ಮಾಡಲಾಗುತ್ತದೆ. ಹೀಗಾಗಿ ಒಂದೇ ಅರ್ಜಿ ರೂಪಿಸಲಾಗಿದೆ. ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್ ಸೀಟು ಪಡೆಯಬೇಕಾದರೆ KEA ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ. ದಾಖಲೆ ಪರಿಶೀಲನೆ ಕೂಡ ಎಲ್ಲ ಕೋರ್ಸ್ ಗಳಿಗೂ ಒಂದೇ ಇರುತ್ತದೆ.
ಹಾಗೆಯೇ ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕೆ NATA ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ. ಆದರೆ ಅವರಿಗೂ ಸೀಟು ಹಂಚಿಕೆಯನ್ನು ಕೆಇಎ ಮಾಡುವುದರಿಂದ ಅವರು ಕೂಡ ಅರ್ಜಿ ಸಲ್ಲಿಸಬೇಕು.
ಬಿಪಿಟಿ, ಬಿ.ಎಸ್ಸಿ ಎಎಚ್ಎಸ್, ಬಿಪಿಒ, ಪಿಬಿ ಬಿ.ಎಸ್ಸಿ ನರ್ಸಿಂಗ್ ಮತ್ತು ಎಎಚ್ ಎಸ್(ಲ್ಯಾಟರಲ್ ಎಂಟ್ರಿ), ಡಿ-ಫಾರ್ಮಾ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಇರುವುದಿಲ್ಲ. ಆದರೂ ಅವರು ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಕೆಇಎ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

