ವಿಶೇಷ ದಿನಗಳಲ್ಲಿ ಅಥವಾ ಹಬ್ಬದ ಅತಿಥಿ ಸತ್ಕಾರದ ವೇಳೆ ವಿಭಿನ್ನವಾದ ಸಿಹಿ ತಿನಿಸು ನೀಡಬೇಕೆಂದು ಬಯಸುವವರಿಗೆ ‘ಆಪಲ್ ಮೊಸರು ಗ್ರಾನೋಲಾ ಕ್ರಂಬ್’ ಒಂದು ಅತ್ಯುತ್ತಮ ಆಯ್ಕೆ. ಸೇಬಿನ ತಾಜಾತನ, ಮೊಸರಿನ ಮೃದುತ್ವ ಮತ್ತು ಗ್ರಾನೋಲಾದ ಗರಿಗರಿ ಅಂಶಗಳು ಸೇರಿ ತಯಾರಾಗುವ ಈ ಡೆಸರ್ಟ್ ರುಚಿಯಲ್ಲಿ ಮಾತ್ರವಲ್ಲದೆ ತಯಾರಿಕೆಯಲ್ಲಿಯೂ ಬಹಳ ಸರಳವಾಗಿದೆ. ಹಣ್ಣು ಮತ್ತು ಧಾನ್ಯಗಳ ಮಿಶ್ರಣವಿರುವ ಈ ಖಾದ್ಯವನ್ನು ಸುಲಭವಾಗಿ ಮನೆಯಲ್ಲೇ ಸಿದ್ಧಪಡಿಸಬಹುದು.
ಬೇಕಾಗುವ ಸಾಮಗ್ರಿಗಳು ಒಂದು ಕಪ್ ತಣ್ಣಗಿನ ಬೆಣ್ಣೆ (ಸಣ್ಣ ತುಂಡುಗಳಾಗಿರಲಿ), ಒಂದು ಕಪ್ ಬ್ರೌನ್ ಶುಗರ್, ಎರಡು ಕಪ್ ಫ್ರೂಟ್ ಮತ್ತು ನಟ್ ಗ್ರಾನೋಲಾ, ಒಂದೂವರೆ ಕಪ್ ಮೈದಾ ಹಿಟ್ಟು, ಒಂದು ಚಮಚ ಅಡುಗೆ ಸೋಡಾ, ಒಂದು ಕಪ್ ಗ್ರೀಕ್ ಮೊಸರು, ಒಂದು ಚಮಚ ನಿಂಬೆ ರಸ, ಎರಡು ಚಮಚ ಮೈದಾ (ಫಿಲ್ಲಿಂಗ್ಗಾಗಿ), ಅರ್ಧ ಕಪ್ ಸಕ್ಕರೆ ಮತ್ತು ಅರ್ಧ ಕಪ್ ಹುರಿದ ಪೆಕನ್ ಬೀಜಗಳು.
ಒಳಹೂರಣಕ್ಕೆ (Filling) ಬೇಕಾದವು: ಅರ್ಧ ಚಮಚ ವೆನಿಲ್ಲಾ ಎಸೆನ್ಸ್, ಒಂದು ಚಮಚ ಬೌರ್ಬನ್ ವಿಸ್ಕಿ (ಬೇಕಿದ್ದರೆ ಮಾತ್ರ), ಅರ್ಧ ಚಮಚ ದಾಲ್ಚಿನ್ನಿ ಪುಡಿ, ಒಂದು ಮೊಟ್ಟೆ ಮತ್ತು ಮೂರು ದೊಡ್ಡ ಗಾತ್ರದ ಸಿಪ್ಪೆ ಸುಲಿದು ಸಣ್ಣದಾಗಿ ಹೆಚ್ಚಿದ ಸೇಬು ಹಣ್ಣುಗಳು.
ತಯಾರಿಸುವ ಹಂತಗಳು ಮೊದಲಿಗೆ ಒಂದು ಪಾತ್ರೆಯಲ್ಲಿ ಬೆಣ್ಣೆ, ಬ್ರೌನ್ ಶುಗರ್, ಗ್ರಾನೋಲಾ ಮತ್ತು ಒಂದೂವರೆ ಕಪ್ ಮೈದಾ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ಅಡುಗೆ ಸೋಡಾ ಸೇರಿಸಿ ತರಿತರಿಯಾದ ಮಿಶ್ರಣ (Crumb) ಸಿದ್ಧಪಡಿಸಿಕೊಳ್ಳಬೇಕು. ಈ ಮಿಶ್ರಣದ ಅರ್ಧ ಭಾಗವನ್ನು ಒಂದು ಪೈ ಡಿಶ್ನಲ್ಲಿ ಹರಡಿ ಹತ್ತು ನಿಮಿಷಗಳ ಕಾಲ ಓವನ್ನಲ್ಲಿ ಬೇಯಿಸಬೇಕು. ಉಳಿದ ಅರ್ಧ ಭಾಗವನ್ನು ಮೇಲೆ ಹಾಕಲು ಫ್ರಿಡ್ಜ್ನಲ್ಲಿ ಎತ್ತಿಡಿ.
ಇನ್ನೊಂದೆಡೆ ಒಂದು ಬೌಲ್ನಲ್ಲಿ ಗ್ರೀಕ್ ಮೊಸರು, ನಿಂಬೆ ರಸ, ಎರಡು ಚಮಚ ಮೈದಾ, ಸಕ್ಕರೆ ಮತ್ತು ಹುರಿದ ಪೆಕನ್ ಬೀಜಗಳನ್ನು ಬೆರೆಸಿಟ್ಟುಕೊಳ್ಳಬೇಕು. ಇದರ ಜೊತೆಗೆ ಒಳಹೂರಣಕ್ಕೆ ಬೇಕಾದ ಸೇಬು ಹಣ್ಣಿನ ತುಂಡುಗಳು, ವೆನಿಲ್ಲಾ ಎಸೆನ್ಸ್ ಮತ್ತು ದಾಲ್ಚಿನ್ನಿ ಪುಡಿಯನ್ನು ಬೆರೆಸಬೇಕು. ಮೊದಲೇ ಬೇಯಿಸಿದ ಪೈ ಶೆಲ್ ತಣ್ಣಗಾದ ಮೇಲೆ ಈ ಮಿಶ್ರಣವನ್ನು ಅದಕ್ಕೆ ಸುರಿದು 30 ನಿಮಿಷಗಳ ಕಾಲ ಬೇಯಿಸಬೇಕು.
ನಂತರ ಹೊರತೆಗೆದು ಫ್ರಿಡ್ಜ್ನಲ್ಲಿಟ್ಟಿದ್ದ ಉಳಿದ ಗ್ರಾನೋಲಾ ಮಿಶ್ರಣವನ್ನು ಅದರ ಮೇಲೆ ಉದುರಿಸಿ ಮತ್ತೆ 20 ನಿಮಿಷಗಳ ಕಾಲ ಬೇಯಿಸಬೇಕು. ಓವನ್ನಿಂದ ಹೊರತೆಗೆದ ನಂತರ ಕನಿಷ್ಠ ಅರ್ಧ ಗಂಟೆ ಆರಲು ಬಿಟ್ಟು ನಂತರ ಸವಿಯಲು ನೀಡಬಹುದು.

