ಸಂಜೆ ಸಮಯದಲ್ಲಿ ಚಹಾ ಜೊತೆ ಸವಿಯಲು ಅಥವಾ ಅತಿಥಿಗಳು ಬಂದಾಗ ಸ್ವಾಗತಿಸಲು ಹರಾ ಭರಾ ಕಬಾಬ್ ಅತ್ಯುತ್ತಮ ಆಯ್ಕೆ. ಸಾಮಾನ್ಯವಾಗಿ ನಾವು ತರಕಾರಿಗಳನ್ನು ಬಳಸಿ ಮಾಡುವ ಈ ಕಬಾಬ್‌ಗೆ ಈ ಬಾರಿ ಸೋಯಾ ಸೇರಿಸುವ ಮೂಲಕ ಹೊಸ ರುಚಿ ನೀಡಬಹುದು. ಸೋಯಾ ಪ್ರೋಟೀನ್‌ನಿಂದ ಸಮೃದ್ಧವಾಗಿರುವುದರಿಂದ ಇದು ಕೇವಲ ರುಚಿಯಷ್ಟೇ ಅಲ್ಲದೆ ಆರೋಗ್ಯಕ್ಕೂ ಪೂರಕವಾಗಿದೆ. ಪಾಲಕ್ ಸೊಪ್ಪು, ಹಸಿ ಬಟಾಣಿ ಮತ್ತು ಸೋಯಾ ಬಳಸಿ ತಯಾರಿಸುವ ಈ ಕಬಾಬ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು ಒಂದು ಕಪ್ ಸೋಯಾ ಗ್ರ್ಯಾನ್ಯೂಲ್ಸ್ ಅಥವಾ ಸೋಯಾ ತುರಿ, ಅರ್ಧ ಕಪ್ ಹಸಿ ಬಟಾಣಿ, ಎರಡು ಕಪ್ ಹೆಚ್ಚಿದ ಪಾಲಕ್ ಸೊಪ್ಪು, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಎರಡು ಇಂಚು ಶುಂಠಿ, ಏಳೆಂಟು ಎಸಳು ಬೆಳ್ಳುಳ್ಳಿ, ಐದಾರು ಹಸಿಮೆಣಸಿನಕಾಯಿ, ಒಂದು ಚಮಚ ಚಾಟ್ ಮಸಾಲಾ, ಒಂದು ಚಮಚ ಖಾರದ ಪುಡಿ, ಒಂದು ಚಮಚ ಗರಂ ಮಸಾಲಾ, ಅರ್ಧ ಚಮಚ ಸೋಂಪು ಪುಡಿ, ಸ್ವಲ್ಪ ಹುರಿದ ಕಡಲೆಹಿಟ್ಟು ಎರಡು ಚಮಚ, ಅರ್ಧ ಕಪ್ ಪುದೀನಾ ಎಲೆ, ಒಂದು ಕಪ್ ಕೊತ್ತಂಬರಿ ಸೊಪ್ಪು, ಅರ್ಧ ಕಪ್ ಬ್ರೆಡ್ ಪುಡಿ, ಒಂದು ಚಮಚ ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುರಿಯಲು ಎಣ್ಣೆ.
ತಯಾರಿಸುವ ಹಂತಗಳು ಮೊದಲಿಗೆ ಸೋಯಾ ತುರಿಯನ್ನು ಎರಡು ಕಪ್ ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ 5 ನಿಮಿಷ ಕುದಿಸಬೇಕು. ನಂತರ ಅದರಲ್ಲಿರುವ ನೀರನ್ನು ಸಂಪೂರ್ಣವಾಗಿ ಸೋಸಿ ತೆಗೆದು ಪಕ್ಕಕ್ಕಿಡಬೇಕು. ಒಂದು ಪಾತ್ರೆಯಲ್ಲಿ ಪಾಲಕ್ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸುಮಾರು 5 ನಿಮಿಷ ಹಬೆಯಲ್ಲಿ ಬೇಯಿಸಿಕೊಳ್ಳಬೇಕು. ಇವು ತಣ್ಣಗಾದ ಮೇಲೆ ಹಸಿ ಬಟಾಣಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಈಗ ಒಂದು ದೊಡ್ಡ ಪಾತ್ರೆಯಲ್ಲಿ ರುಬ್ಬಿದ ಪಾಲಕ್ ಮಿಶ್ರಣ, ಸೋಯಾ ತುರಿ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಎಲೆಗಳನ್ನು ಹಾಕಿ ಬೆರೆಸಬೇಕು. ಇದಕ್ಕೆ ಚಾಟ್ ಮಸಾಲಾ, ಖಾರದ ಪುಡಿ, ಗರಂ ಮಸಾಲಾ, ಸೋಂಪು ಪುಡಿ ಹಾಗೂ ಉಪ್ಪನ್ನು ಸೇರಿಸಬೇಕು. ನಂತರ ನಿಂಬೆ ರಸ ಮತ್ತು ಹುರಿದ ಕಡಲೆಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಕೊನೆಯಲ್ಲಿ ಈ ಮಿಶ್ರಣಕ್ಕೆ ಬ್ರೆಡ್ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ತಯಾರಾದ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಕಬಾಬ್ ಅಥವಾ ಟಿಕ್ಕಿ ಆಕಾರದಲ್ಲಿ ತಟ್ಟಿಕೊಳ್ಳಬೇಕು. ನಂತರ ಬಿಸಿ ಇರುವ ಹಂಚಿನ ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಗಳಲ್ಲಿ ಹದವಾಗಿ ಕೆಂಪಾಗುವವರೆಗೆ ಹುರಿಯಬೇಕು. ಬಿಸಿಯಾಗಿರುವ ಈ ಹರಾ ಭರಾ ಸೋಯಾ ಕಬಾಬ್ ಅನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆ ಸವಿಯಲು ನೀಡಬಹುದು.

