HomeKarnatakaBREAKING: ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ನಿರ್ಮಿಸಿದ ಸೇತುವೆ ಮೇ ನಲ್ಲಿ ಸಂಚಾರಕ್ಕೆ ಮುಕ್ತ

BREAKING: ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ನಿರ್ಮಿಸಿದ ಸೇತುವೆ ಮೇ ನಲ್ಲಿ ಸಂಚಾರಕ್ಕೆ ಮುಕ್ತ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಸಿರುಮಕ್ಕಿ ಬಳಿ ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ KRDCL ವತಿಯಿಂದ ರೂ. 125.67ಕೋಟಿಗಳ ಅಂದಾಜು ವೆಚ್ಚದ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೇ ಮಸಾಂತ್ಯದೊಳಗೆ ಜನಸಂಚಾರಕ್ಕೆ ಮುಕ್ತಗೊಳಿಸಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅವರು ಇಂದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ  ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಹಿನ್ನೀರಿನ ಲಾಂಚ್ ನಲ್ಲಿ ಪ್ರಯಾಣಿಸಿ, ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಅಗತ್ಯವಿರುವ 56.14 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೇ ಮಾಹೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಳಿಸಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸೇತುವೆಯ ನಿರ್ಮಾಣದಿಂದಾಗಿ ಶರಾವತಿ ಸಂತ್ರಸ್ತ ಗ್ರಾಮಗಳಿರುವ ಆರು ಪಂಚಾಯಿತಿಗಳ ನಿವಾಸಿಗಳಿಗೆ ಹಾಗೂ ಸಾಗರ ಪಟ್ಟಣದಿಂದ ಕೊಲ್ಲೂರಿಗೆ 32ಕೀ. ಮೀ. ಅಂತರ ಕಡಿತಗೊಳ್ಳಲಿದೆ ಎಂದರು.

ಪ್ರಸ್ತುತ ಪ್ರಗತಿಯಲ್ಲಿರುವ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ದೈತ್ಯ ಕಾಂಕ್ರೀಟ್ ಬ್ಲಾಕ್ ಗಳಲ್ಲಿ ಗುಣಮಟ್ಟದ ಕೊರತೆ ಹಾಗೂ ಬ್ಲಾಕ್ ನ ಕ್ಷಮತೆಯಲ್ಲಿ ನ್ಯೂನತೆಗಳಿದ್ದಿದ್ದರಿಂದಾಗಿ ಬದಲಿ ವ್ಯವಸ್ಥೆ ಕಲ್ಪಿಸುವಲ್ಲಿ ವಿಳಂಬವಾಗಿದೆ. ಅದಾಗಿಯೂ ಇನ್ನೂ ವಿಳಂಬಕ್ಕೆ ಅವಕಾಶವಿಲ್ಲದಂತೆ ಸೇತುವೆ ಲೋಕಾರ್ಪಣೆಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಸಾಗರ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಎರಡು ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಭೂ ಪರಿಹಾರ ಮೊತ್ತ ಉಳಿಕೆ 11 ಕೋಟಿ ರೂ.ಗಳನ್ನು ಈ ಕೂಡಲೇ ಮಂಜೂರು ಮಾಡಲಾಗುವುದು ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನವರ ಅಪೇಕ್ಷೆಯಂತೆ ಲೋಕೋಪಯೋಗಿ ಸಚಿವರು ಸೇತುವೆ ನಿರ್ಮಾಣ ಕಾರ್ಯಕ್ಕೆ ವೇಗ ಹೆಚ್ಚಿಸಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡುವ ಭರವಸೆ ನೀಡಿರುವುದು ಸಂತಸ ತಂದಿದೆ. ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಂಬಂದಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ಕರೆಸಿ ನಡೆಸಿದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದರು.

ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಹಸಿರುಮಕ್ಕಿ ಭಾಗದ ನಿವಾಸಿಗಳು ಅತಿ ಹೆಚ್ಚು ಕಾತರರಾಗಿದ್ದಾರೆ. ಸದರಿ ಸೇತುವೆ ನಿರ್ಮಿಸುವುದರಿಂದ  ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಏರ್ಪಡಲಿದೆ. ಸಾಗರದಿಂದ ಕೊಲ್ಲೂರು, ಉಡುಪಿ, ಮುಂತಾದ ಯಾತ್ರಾ ಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಮಂಗಳೂರು ಪಟ್ಟಣ, ಮಂಗಳೂರು ಬಂದರು ಮತ್ತು ಕುಂದಾಪುರ ಪಟ್ಟಣಗಳಿಗೆ ಸಮೀಪವಾಗಲಿದೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular