ಬೆಂಗಳೂರು: ಪ್ರಾಣ ಸ್ನೇಹಿತರಾಗಿದ್ದರೂ ಹಣಕಾಅಸು, ಬ್ಯಾಂಕ್ ವ್ಯವಹಾರಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು ಎಂಬುದಕ್ಕೆ ಈ ಘಟನೆ ಸಾಕ್ಷಿಯಂಬಂತಿದೆ. ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನನ್ನು ನಂಬಿ ಬ್ಯಾಂಕ್ ಖಾತೆಯ ವಿರಗಳನ್ನು ನೀಡಿ ಕೋಟಿ ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತನ್ನ ಸ್ನೇಹಿತ ಆಯುಷ್ ಎಂಬಾತನನ್ನು ಅತಿಯಾಗಿ ನಂಬಿದ ವಿದ್ಯಾರ್ಥಿಯೊಬ್ಬ ತನ್ನ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿದ್ದ. ಆಯುಷ್ ತನ್ನ ಗೆಳೆಯ ಎಂಬುದನ್ನೂ ಲೆಕ್ಕಿಸದೇ ಆತನ ಖಾತೆಯನ್ನು ದುರ್ಬಳಕೆ ಮಾಡಿಕೊಂಡು 7 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಬ್ಯಾಂಕ್ ಮಾಹಿತಿ ನೀಡಿದ ನಂತರ ವಂಚನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ಹಾಗೂ ಆಯುಷ್ ಎಂಬಾತ ಕಳೆದ ಒಂದು ವರ್ಷಗಳಿದ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಸ್ನೇಹಿತನನ್ನು ನಂಬಿ ವಿದ್ಯಾರ್ಥಿ ತನ್ನ ಬ್ಯಾಂಕ್ ಖಾತೆ ವಿವರ ನೀಡಿದ್ದಾನೆ. ಗೆಳೆಯ ಆಯುಷ್, ವಿದ್ಯಾರ್ಥಿಯನ್ನು ಸೈಬರ್ ವಂಚನೆಯ ಖೆಡ್ಡಾದಲ್ಲಿ ಸಿಲುಕಿಸಿದ್ದಾನೆ.
ವಿದ್ಯಾರ್ಥಿಗೆ ಪರಿಚಯವಾಗಿದ್ದ ಆಯುಷ್, ತನ್ನ ಅಕೌಂಟ್ ಬ್ಲಾಕ್ ಆಗಿದೆ ಎಂದು ವಿದ್ಯಾರ್ಥಿ ಬಳಿ ಆತನ ಬ್ಯಾಂಕ್ ವಿವರಗಳನ್ನು ಕೇಳಿದ್ದ. ಆತನನ್ನು ನಂಬಿದ್ದ ವಿದ್ಯಾರ್ಥಿ ತನ್ನ ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಎಲ್ಲವನ್ನೂ ಆಯುಷ್ಗೆ ನೀಡಿದ್ದ. ಇದನ್ನೇ ಬಳಸಿಕೊಂಡ ಆಯುಷ್, ಅಕೌಂಟ್ ಮೂಲಕ ಸುಮಾರು 7 ಕೋಟಿ ರೂ. ಹಣ ವರ್ಗಾಯಿಸಿದ್ದು, ಇದೇ ವಿಚಾರದಿಂದ ಬ್ಯಾಂಕ್ ಇತ್ತೀಚೆಗೆ ವಿದ್ಯಾರ್ಥಿಯನ್ನು ಸಂಪರ್ಕಿಸಿದೆ.
ನಿಮ್ಮ ಅಕೌಂಟ್ ಮೂಲಕ ಸೈಬರ್ ವಂಚನೆ ನಡೆದಿದೆ ಎಂದು ವಿದ್ಯಾರ್ಥಿಗೆ ಬ್ಯಾಂಕ್ ಮಾಹಿತಿ ನೀಡಿದ್ದು, ನಂತರ ವಿದ್ಯಾರ್ಥಿಯ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಈ ಘಟನೆ ಬಗ್ಗೆ ವಿದ್ಯಾರ್ಥಿ ಆಘಾತಕ್ಕೊಳಗಾಗಿದ್ದು, ತಕ್ಷಣ ಬೆಂಗಳೂರು ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸಿದ್ದಾರೆ.
ಆತ್ಮೀಯ ಗೆಳಯನೇ ಆಗಿರಲಿ, ಸಂಬಂಧಿಕರೇ ಆಗಿರಲಿ ಬ್ಯಾಂಕ್ ಖಾತೆ ವಿವರ, ಎಟಿಎಂ ಕಾರ್ಡ್ ಗಳನ್ನು ಕೊಡುವ ಮುನ್ನ ಸ್ವಲ್ಪ ಎಚ್ಚರಿಕೆ ವಹಿಸಿ. ಅತಿಯಾಗಿ ನಂಬಿ ಹಣ ಕಳೆದುಕೊಂಡು ಮೋಸ ಹೋಗುವುದಕ್ಕಿಂತ ಮುಂಜಾಗೃತೆ ವಹಿಸುವುದೇ ಒಳಿತು.

