ಆಂಧ್ರಪ್ರದೇಶ : ನಾವು ಅಮೃತವೆಂದು ಭಾವಿಸಿ ಕುಡಿಯುವ ಹಾಲು, ನಮ್ಮ ಪ್ರಾಣವನ್ನೇ ತೆಗೆಯುವ ವಿಷವಾಗಿ ಬದಲಾದರೆ? ಹೌದು, ರಾಜಮಂಡ್ರಿಯಲ್ಲಿ ಅಕ್ಷರಶಃ ಇದೇ ನಡೆದಿದೆ. ಮುಂಜಾನೆ ಎದ್ದು ತಾಜಾ ಹಾಲೆಂದು ಕುಡಿದ ಆ ಮಹಿಳೆಯರು, ಕಲಬೆರಕೆಯ ರೂಪದಲ್ಲಿ ಮೃತ್ಯು ಹೊಂಚು ಹಾಕಿದೆ ಎಂದು ಊಹಿಸಿರಲಿಲ್ಲ. ಈ ಘೋರ ಘಟನೆಯಲ್ಲಿ ಈಗಾಗಲೇ ಇಬ್ಬರು ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ 13 ಮಂದಿ ಸಾವಿನೊಂದಿಗೆ ಹೋರಾಡುತ್ತಿದ್ದಾರೆ. ಈಗ ಆ ಭಾಗದ ಜನರಲ್ಲಿ ಹಾಲು ಕುಡಿಯುವುದೆಂದರೆ ಬೆಚ್ಚಿಬೀಳುವಂತಾಗಿದೆ.
ಹೌದು. ಆಂಧ್ರಪ್ರದೇಶದ ರಾಜಮಂಡ್ರಿಯ ಚೌಡೇಶ್ವರಿ ನಗರದಲ್ಲಿ ಕಲಬೆರಕೆ ಹಾಲು ಭೀಕರ ದುರಂತಕ್ಕೆ ಕಾರಣವಾಗಿದೆ. ಈ ಹಾಲು ಸೇವಿಸಿದವರಲ್ಲಿ ಕೃಷ್ಣವೇಣಿ (85) ಮತ್ತು ಕನಕರತ್ನಂ (70) ಎಂಬ ಇಬ್ಬರು ವೃದ್ಧೆಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೇ ಹಾಲು ಕುಡಿದ ಇನ್ನೂ 13 ಮಂದಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಐವರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವ್ಯಾಪಾರಿಯ ಬಂಧನ: ಬಾಧಿತರೆಲ್ಲರೂ ‘ಅನೂರಿಯಾ’ (Anuria) ಎಂಬ ವಿಚಿತ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂದರೆ, ಇವರ ದೇಹದ ಕಿಡ್ನಿಗಳು ಸಂಪೂರ್ಣವಾಗಿ ಹಾನಿಗೊಳಗಾಗಿ ಮೂತ್ರ ವಿಸರ್ಜನೆ ನಿಂತುಹೋಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಪ್ರವೃತ್ತರಾಗಿ ಕಲಬೆರಕೆ ಹಾಲು ಮಾರುತ್ತಿದ್ದ ವ್ಯಾಪಾರಿಯನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ (Lab) ಕಳುಹಿಸಿದ್ದಾರೆ.
ವೈದ್ಯರ ತಪಾಸಣೆ: ಆದರೆ, ಈ ಸಾವುಗಳು ಕಲಬೆರಕೆ ಹಾಲಿನಿಂದಲೇ ಸಂಭವಿಸಿದೆಯೇ? ಅಥವಾ ಅಪಾರ್ಟ್‌ಮೆಂಟ್‌ನ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದ ಕಾರಣ ಯಾವುದಾದರೂ ಸೋಂಕು ಹರಡಿದೆಯೇ? ಎಂಬ ಬಗ್ಗೆಯೂ ವೈದ್ಯರು ತನಿಖೆ ನಡೆಸುತ್ತಿದ್ದಾರೆ. ಪ್ರಯೋಗಾಲಯದ ವರದಿ ಬಂದ ನಂತರವೇ ಈ ಸಾವಿನ ಹಿಂದಿನ ಅಸಲಿ ಕಾರಣವೇನು ಎಂಬುದು ಅಧಿಕೃತವಾಗಿ ತಿಳಿಯಲಿದೆ.

