ಋತುಮಾನ ಬದಲಾಯಿತೆಂದರೆ ಸಾಕು, ಮನೆಯಲ್ಲಿ ಒಬ್ಬರಿಗೆ ಶೀತವಾದರೆ ಸಾಲು ಸಾಲಾಗಿ ಎಲ್ಲರಿಗೂ ಅಂಟಿಕೊಳ್ಳುತ್ತದೆ. ಆ ಸೀನು, ತಲೆನೋವು, ಮೂಗು ಸೋರುವುದು.. ಅಬ್ಬಾ! ಆ ನರಕ ವರ್ಣನಾತೀತ. ಶೀತಕ್ಕೆ ಈ ಲೋಕದಲ್ಲಿ ಮದ್ದೇ ಇಲ್ಲ ಎಂದು ಇದುವರೆಗೆ ನಂಬಲಾಗಿತ್ತು. ಆದರೆ, ಇನ್ಮುಂದೆ ಆ ಚಿಂತೆ ಬೇಡ. ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಂದು ಅದ್ಭುತವಾದ ‘ಮ್ಯಾಜಿಕಲ್ ನಾಸಿಕಲ್ ಸ್ಪ್ರೇ’ (Nasal Spray) ಕಂಡುಹಿಡಿದಿದ್ದಾರೆ.
ಹೌದು. ಜಗತ್ತನ್ನೇ ಕಾಡುವ ಸಾಮಾನ್ಯ ಶೀತದಿಂದ ಹಿಡಿದು ಪ್ರಾಣಾಂತಕ ಕೋವಿಡ್‌ವರೆಗೆ ಎಲ್ಲಾ ರೀತಿಯ ವೈರಸ್‌ಗಳನ್ನು ತಡೆಯಬಲ್ಲ ಏಕೈಕ ‘ಮ್ಯಾಜಿಕಲ್ ನಾಸಿಕಲ್ ಸ್ಪ್ರೇ’ ಅನ್ನು ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಈ ವಿಶಿಷ್ಟ ಲಸಿಕೆಯು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಎಷ್ಟು ಶಕ್ತಿಯುತಗೊಳಿಸುತ್ತದೆ ಎಂದರೆ, ಒಮ್ಮೆ ಇದನ್ನು ಬಳಸಿದರೆ ಸಾಕು, ಯಾವುದೇ ವೈರಸ್ ದೇಹ ಪ್ರವೇಶಿಸಿದರೂ ಅದು ಮರುಕ್ಷಣವೇ ಹತೋಟಿಗೆ ಬರುತ್ತದೆ. ವೈರಸ್‌ಗಳ ಪ್ರಭಾವವನ್ನು 1,000 ಪಟ್ಟು ತಗ್ಗಿಸುವ ಸಾಮರ್ಥ್ಯವಿರುವ ಈ ಆವಿಷ್ಕಾರವು ಭವಿಷ್ಯದ ಮಹಾಮಾರಿಗಳ ವಿರುದ್ಧ ಮಾನವನಿಗೆ ಸಿಕ್ಕ ದೊಡ್ಡ ರಕ್ಷಾ ಕವಚ ಎನ್ನಲಾಗುತ್ತಿದೆ. ಇದನ್ನು ಮೂಗಿಗೆ ಹಾಕಿಕೊಂಡರೆ ಸಾಕು.. ಅತ್ತ ಶೀತ, ಇತ್ತ ಅಲರ್ಜಿ.. ಅಷ್ಟೇ ಏಕೆ, ಪ್ರಾಣಾಂತಕ ವೈರಸ್‌ಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ!
ಇದು ‘ಸಾರ್ವತ್ರಿಕ ಲಸಿಕೆ’ (Universal Vaccine)!
ಇದುವರೆಗೆ ನಾವು ಬಳಸುವ ಲಸಿಕೆಗಳು ಒಂದೊಂದು ಕಾಯಿಲೆಗೆ ಒಂದೊಂದು ರೀತಿ ಕೆಲಸ ಮಾಡುತ್ತವೆ. ಆದರೆ ಈ ಹೊಸ ಲಸಿಕೆ ಹಾಗಲ್ಲ. ಇದೊಂದು “ಸಾರ್ವತ್ರಿಕ ಲಸಿಕೆ”. ಅಂದರೆ ಇದು ಕೇವಲ ಶೀತವನ್ನಷ್ಟೇ ಅಲ್ಲದೆ.. ಫ್ಲೂ, ಕೋವಿಡ್, ಬ್ಯಾಕ್ಟೀರಿಯಾದಿಂದ ಬರುವ ಶ್ವಾಸಕೋಶದ ಸೋಂಕುಗಳು ಮತ್ತು ನಮ್ಮನ್ನು ಪೀಡಿಸುವ ಧೂಳಿನ ಅಲರ್ಜಿಗಳಿಂದಲೂ ರಕ್ಷಣೆ ನೀಡುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಇದು ಏಕೈಕ ಪರಿಹಾರವಾಗಲಿದೆ.
ದೇಹದಲ್ಲಿ 24/7 ಸೆಕ್ಯೂರಿಟಿ ಗಾರ್ಡ್ಸ್!
ಈ ಸ್ಪ್ರೇ ನಮ್ಮ ದೇಹವನ್ನು ಪ್ರವೇಶಿಸುತ್ತಿದ್ದಂತೆ ಒಂದು ವಿಸ್ಮಯ ನಡೆಯುತ್ತದೆ. ಇದು ನಮ್ಮ ಶ್ವಾಸಕೋಶದಲ್ಲಿರುವ ಬಿಳಿ ರಕ್ತಕಣಗಳನ್ನು (ಮ್ಯಾಕ್ರೋಫೇಜಸ್) ಸಂಪೂರ್ಣ ‘ಅಲರ್ಟ್ ಮೋಡ್’ಗೆ ಕಳುಹಿಸುತ್ತದೆ. ಅಂದರೆ ನಮ್ಮ ದೇಹದೊಳಗೆ ಯಾವುದೇ ಹೊಸ ವೈರಸ್ ಪ್ರವೇಶಿಸಿದರೂ, ಈ ಕಣಗಳು ತಕ್ಷಣವೇ ಅವುಗಳನ್ನು ಗುರುತಿಸಿ, ಮಿಂಚಿನ ವೇಗದಲ್ಲಿ ದಾಳಿ ಮಾಡಿ ಕೊಂದು ಹಾಕುತ್ತವೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ, ಈ ಸ್ಪ್ರೇ ಬಳಸಿದ ನಂತರ ವೈರಸ್‌ಗಳ ಪ್ರಭಾವ 1,000 ಪಟ್ಟು ಕಡಿಮೆಯಾಗಿರುವುದು ಕಂಡುಬಂದಿದೆ. ಒಮ್ಮೆ ಬಳಸಿದರೆ ಮೂರು ತಿಂಗಳವರೆಗೆ ನಿಮ್ಮ ದೇಹದಲ್ಲಿ ಒಬ್ಬ ಶಕ್ತಿಶಾಲಿ ಸೆಕ್ಯೂರಿಟಿ ಗಾರ್ಡ್ ಇದ್ದಂತೆ!
ಅಲರ್ಜಿಗಳ ವಿರುದ್ಧ ಯುದ್ಧ
ಬಹಳಷ್ಟು ಜನರಿಗೆ ಧೂಳು ಕಂಡರೆ ಆಗುವುದಿಲ್ಲ (Dust Allergy), ಇದರಿಂದ ಅಸ್ತಮಾದಂತಹ ಸಮಸ್ಯೆಗಳು ಕಾಡುತ್ತವೆ. ಈ ನಾಸಿಕಲ್ ಸ್ಪ್ರೇ ಅಂತಹ ಅಲರ್ಜಿಗಳ ಪ್ರಭಾವವನ್ನೂ ಗಣನೀಯವಾಗಿ ತಗ್ಗಿಸುತ್ತದೆ. ಸಾಮಾನ್ಯವಾಗಿ ಯಾವುದೇ ಹೊಸ ವೈರಸ್ ಬಂದಾಗ ಅದಕ್ಕೆ ಮದ್ದು ಕಂಡುಹಿಡಿಯಲು ತಿಂಗಳುಗಳ ಕಾಲ ಬೇಕಾಗುತ್ತದೆ. ಆದರೆ ಈ ಸ್ಪ್ರೇ ನಿಮ್ಮ ಬಳಿಯಿದ್ದರೆ, ಯಾವುದೇ ಹೊಸ ಮಹಮ್ಮಾರಿ ಬಂದರೂ ಅದು ನಿಮ್ಮ ಪ್ರಾಣ ಉಳಿಸುವ ರಕ್ಷಾಕವಚದಂತೆ ಕೆಲಸ ಮಾಡುತ್ತದೆ.
ಭವಿಷ್ಯದ ಮೇಲೆ ಹೊಸ ಭರವಸೆ
ಸದ್ಯಕ್ಕೆ ಇಲಿಗಳ ಮೇಲೆ ನಡೆಸಿದ ಈ ಪ್ರಯೋಗ ಯಶಸ್ವಿಯಾಗಿದೆ. ಶೀಘ್ರದಲ್ಲೇ ಮನುಷ್ಯರ ಮೇಲೆ ಪರೀಕ್ಷೆಗಳು (Human Trials) ನಡೆಯಲಿವೆ. “ಇದು ಇದುವರೆಗೆ ನಾವು ನೋಡಿದ ಲಸಿಕೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ” ಎಂದು ಪ್ರೊಫೆಸರ್ ಬಾಲ ಪುಲೇಂದ್ರನ್ ಹೇಳಿದ್ದಾರೆ. ಈ ಪ್ರಾಜೆಕ್ಟ್ ಸಂಪೂರ್ಣವಾಗಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ‘ಚಳಿಗಾಲದ ಶೀತ’ ಎಂಬುದು ಕೇವಲ ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ಕಾಣಸಿಗಬಹುದು!

