ಕೊಪ್ಪಳ: ಬಾಕಿ ಬಿಲ್ ಪಾವತಿಗೆ ಒತ್ತಾಯಿಸಿ ಮಾರ್ಚ್ 6ರಂದು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ವಿವಿಧ ಇಲಾಖೆಗಳಲ್ಲಿ 37 ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಬಿಲ್ ಬಿಡುಗಡೆಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಹೀಗಿದ್ದರೂ ಬಿಲ್ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಸುಮಾರು 25,000 ಗುತ್ತಿಗೆದಾರರು ಭಾಗವಹಿಸಲಿದ್ದಾರೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಏಪ್ರಿಲ್ ನಿಂದ ಕುಟುಂಬ ಸದಸ್ಯರ ಜೊತೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಾವು ಯಾರಿಗೂ ಬ್ಲಾಕ್ಮೇಲ್ ಮಾಡುತ್ತಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಸಚಿವರು ಕೇವಲವಾಗಿ ಮಾತನಾಡುವುದು ಸರಿಯಲ್ಲ, ಲೋಕೋಪಯೋಗಿ ಇಲಾಖೆಯಲ್ಲಿ ಮಾತ್ರ ಪ್ಯಾಕೇಜ್ ಸಿಸ್ಟಮ್ ಇಲ್ಲ, ಉಳಿದಂತೆ ಎಲ್ಲಾ ಇಲಾಖೆಗಳಲ್ಲಿ ನಿಯಮ ಮೀರಿ ಪ್ಯಾಕೇಜ್ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ಯಾಕೇಜ್ ಸಿಸ್ಟಮ್ ವಿರೋಧಿಸುತ್ತಿದ್ದರು. ಈಗ ಅವರೇ ಪ್ಯಾಕೇಜ್ ಸಿಸ್ಟಮ್ ಮಾಡುತ್ತಿದ್ದಾರೆ. ಹಳೆ ಬಿಲ್ ಗಳಿಗೆ ಈಗಿರುವ ಸರ್ಕಾರದಲ್ಲಿ ಮೊದಲಿಗಿಂತ ಹೆಚ್ಚಿನ ಕಮಿಷನ್ ತೆಗೆದುಕೊಳ್ಳುತ್ತಾರೆ. ಮಾರ್ಚ್ 6ರಂದು ಯಾವ ಇಲಾಖೆಯಲ್ಲಿ ಎಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಾಗುವುದು ಎಂದು ಹೇಳಿದ್ದಾರೆ.

