ಬೆಂಗಳೂರು: ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆಯಾಗಲಿದೆ. ಪ್ರತಿ ಯೂನಿಟ್ ಗೆ 12 ರಿಂದ 15 ಪೈಸೆಗಳಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ(KERC) ನಿರ್ಧರಿಸಿದೆ.
2025- 26, 2026 -27 ಮತ್ತು 2027- 28ನೇ ಆರ್ಥಿಕ ವರ್ಷಗಳಿಗೆ ಈಗಾಗಲೇ ದರ ನಿಗದಿ ಮಾಡಲಾಗಿತ್ತು. ಆದರೆ ಎಸ್ಕಾಂಗಳಿಗೆ ಆಗಿರುವ ನಷ್ಟ ಸರಿದೂಗಿಸಲು ಹೆಚ್ಚುವರಿ ದರ ಏರಿಕೆಗೆ KERC ಚಿಂತನೆ ನಡೆಸಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ನಂತರ 2026ರ ಏಪ್ರಿಲ್ 1ರಿಂದ ಪರಿಷ್ಕೃತ ವಿದ್ಯುತ್ ದರ ಪ್ರಕಟವಾಗುವ ಸಾಧ್ಯತೆ ಇದೆ.
ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿರುವ ಪ್ರಸ್ತಾವನೆಯಂತೆ 2026- 27ನೇ ಸಾಲಿಗೆ ಸರಾಸರಿ 64 ಪೈಸೆಯಷ್ಟು ದರ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಕೆಲವು ವರ್ಗಗಳಲ್ಲಿ 67ರಿಂದ 99 ಪೈಸೆಗಳ ವರೆಗೆ ಏರಿಕೆಯಾಗಬಹುದು ಎನ್ನಲಾಗಿದೆ.
ಗೃಹಬಳಕೆ ವಿದ್ಯುತ್ ಶುಲ್ಕ ಸ್ವಲ್ಪ ಏರಿಕೆಯಾಗಬಹುದು. ಆದರೆ, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಆದಾಯ ಕೊರತೆ ಎದುರಿಸುತ್ತಿದ್ದು, ಸುಮಾರು 4,500 ಕೋಟಿ ರೂ. ನಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ನಷ್ಟ ಸರಿದೂಗಿಸಲು ದರ ಏರಿಕೆಗೆ ಬೆಸ್ಕಾಂಗಳು ಮನವಿ ಮಾಡಿವೆ. KERC ಈಗಾಗಲೇ ರಾಜ್ಯದ ವಿವಿಧೆಡೆ ಸಾರ್ವಜನಿಕರ ಅಹವಾಲು ಆಲಿಸತೊಡಗಿದ್ದು, ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

