ಶಿವಮೊಗ್ಗ: ರಕ್ಷಣೆ ನೀಡಬೇಕಾದ ಪೊಲೀಸಪ್ಪನೇ ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದು, ನೊಂದ ವಿಧವೆ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸನ ಕಾಟಕ್ಕೆ ಬೇಸತ್ತ ವಿಧವೆ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ. ಶಿವಮೊಗ್ಗದ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸ್ವಾತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಕರ್ತವ್ಯ ನಿರ್ವಹಿಸುವ ಮೋಹನ್ ಹೆಸರು ಬರೆದಿಟ್ಟು ಸ್ವಾತಿ ಸಾವಿಗೆ ಶರಣಾಗಿದ್ದಾರೆ.
ಸ್ವಾತಿ ಹಾಗೂ ಜಗದೀಶ್ ಮದುವೆಯಾಗಿ 7 ವರ್ಷವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಾರದ ಹಿಂದಷ್ಟೇ ಸ್ವಾತಿ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್, ಸ್ವಾತಿಗೆ ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿ ಕಾಟಕೊಡಲಾರಂಭಿಸಿದ್ದ. ಆತನ ಅಕೌಂಟ್ ನ್ನು ಸ್ವಾತಿ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡ ಪೋಲಿಸ್ ಬೇರೆ ಅಕೌಂಟ್ ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಲಾರಂಭಿಸಿದ್ದ. ಪೊಲೀಸ್ ಸಿಬ್ಬಂದಿಯಾಗಿರುವ ಮೋಹನ್ ವರ್ತನೆಯಿಂದ ಬೇಸತ್ತ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಾವಿಗೂ ಮುನ್ನ ಸ್ವಾತಿ ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಸಾರಿ ಅಮ್ಮ. ನನ್ನ ಬಗ್ಗೆ ಇಲ್ಲ ಸಲ್ಲದ ವಿಚಾರವನ್ನು ಕೆಟ್ಟದಾಗಿ ಜನಗಳ ಹತ್ತಿರ ಮೋಹನ್ ಹೇಳಿದ್ದಾರೆ. ಇದರಿಂದ ತುಂಬಾ ಮನನೊಂದಿದ್ದೇನೆ. ಈಗಾಗಲೇ ಪತಿಯನ್ನು ಕಳೆದುಕೊಂಡಿದ್ದೇನೆ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಕೆಟ್ಟದಾಗಿ ಜನರ ಬಳಿ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತ್ತಾಯಿತು. ಅವನನ್ನು ಮಾತ್ರ ಸಮ್ಮನೇ ಬಿಡಬೇಡಿ ಎಂದು ಬರೆದಿಟ್ಟಿದ್ದಾರೆ.
ಆತ ಯಾರು ಅಂತಾನೆ ನಂಗೆ ಗೊತ್ತಿರಲಿಲ್ಲ. ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಕ್ಷಮಿಸಿ ಅಮ್ಮ ಎಂದು ಸ್ವಾತಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

